ಸಾರಾಂಶ
-ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ
------ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿರುವ ಅನಧಿಕೃತ ಅಂಗಡಿಗಳ ತೆರವು ಮಾಡಲು ಸೂಚನೆ ನೀಡಿದರೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿಷ್ಕಾಳಜಿ ವಹಿಸಿವೆ. ಈ ಬಗ್ಗೆ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಪಾಲಿಸಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ ಹೇಳಿದರು.ನಗರದ ಮಿನಿವಿಧಾನಸೌಧದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ನಗರದ ಫುಟ್ಪಾತ್ ಅತಿಕ್ರಮಣ ಮಿತಿ ಮೀರಿದ್ದು, ನಗರದ ಗಂಗಾವತಿ ರಸ್ತೆ, ಕುಷ್ಟಗಿ ರಸ್ತೆ, ರಾಯಚೂರು ರಸ್ತೆಯಲ್ಲಿ ಅನಧಿಕೃತ ಅಂಗಡಿ ಹಾಕಲಾಗಿದೆ. ಇವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರೂ ಬೆಲೆ ಇಲ್ಲದಂತಾಗಿದೆ. ಸರ್ಕಾರ ಆಸ್ತಿ ರಕ್ಷಿಸುವುದು ಸಂಬಂಧಿಸಿದ ಅಧಿಕಾರಿಗಳ ಜವಾಬ್ಧಾರಿ. ಅನಧಿಕೃತ ಅಂಗಡಿಗಳ ತೆರವಿಗೆ ನಗರಸಭೆ ಮುಂದಾಗುತ್ತಿಲ್ಲ ಎಂದು ದೂರಿದ ಅವರು, ಈ ಅಂಗಡಿಗಳಿಗೆ ಹೇಗೆ ವಿದ್ಯುತ್ ಸಂಪರ್ಕ ಕಲ್ಪಿಸಿದಿರಿ ಎಂದು ಜೆಸ್ಕಾಂ ಎಇಇ ಶ್ರೀನಿವಾಸ ಗೊಲ್ಲರ್ ಅವರನ್ನು ತರಾಟೆಗೆ ತೆಗೆದುಕೊಂಡರು. ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
--------------------ಫೋಟೋ:25ಕೆಪಿಎಸ್ಎನ್ಡಿ6: ಸಿಂಧನೂರಿನ ಮಿನಿವಿಧಾನಸೌಧ ಸಭಾಂಗಣದಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಯಿತು