ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕು ಆಡಳಿತದಿಂದ ಜೂ.30ರಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವವನ್ನು ವಿಜೃಂಭಣೆ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಎಂದು ತಹಸೀಲ್ದಾರ್ ನಯೀಂಉನ್ನೀಸಾ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಕೆಂಪೇಗೌಡರ ಜಯಂತ್ಯುತ್ಸವಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೂರ್ಣಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರದ ನಿರ್ದೇಶನದಂತೆ ಜೂ.27ರಂದು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಿದ ನಂತರ, ಜೂ.30ರ ಭಾನುವಾರ ಸಂಜೆ 6 ಗಂಟೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬಹಳ ಅರ್ಥಪೂರ್ಣವಾಗಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಿಸಲಾಗುವುದು ಎಂದರು.ಅಂದು ಸಂಜೆ 5 ಗಂಟೆಗೆ ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಸರ್ವಾಲಂಕೃತ ವಾಹನದಲ್ಲಿರಿಸಿ ಅಲಂಕರಿಸಿದ ಜಾನುವಾರುಗಳು, ವಿವಿಧ ಜಾನಪದ ಕಲಾತಂಡ ಮತ್ತು ಪೂರ್ಣಕುಂಭ ಸ್ವಾಗತದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದರು.
ಜಯಂತ್ಯುತ್ಸವದ ಅಂಗವಾಗಿ ಪುರಸಭೆಯಿಂದ ಸ್ವಚ್ಛತಾ ಕಾರ್ಯ ನಡೆಸುವ ಜೊತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಟಿಸಬೇಕು. ತೋಟಗಾರಿಕೆ ಇಲಾಖೆಯಿಂದ ಸಮಾರಂಭ ನಡೆಯುವ ವೇದಿಕೆಯ ಅಲಂಕಾರಕ್ಕೆ ಅಗತ್ಯ ಹೂ ಕುಂಡಗಳನ್ನು ಒದಗಿಸಬೇಕು. 150ಕ್ಕೂ ಹೆಚ್ಚು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಪೂರ್ಣಕುಂಭದ ವ್ಯವಸ್ಥೆ ಮಾಡಿಸಬೇಕು ಎಂದರು.ಸಮಾರಂಭದ ವೇದಿಕೆಯಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಮತ್ತು ಸಾಧನೆ ಕುರಿತು ಪ್ರಧಾನ ಉಪನ್ಯಾಸದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವು ಸಾಧಕರನ್ನು ಸನ್ಮಾನಿಸಲಾಗುವುದು. ಒಟ್ಟಾರೆ ಈ ಬಾರಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ವಿಜೃಂಭಣೆಯ ಜೊತೆಗೆ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್ ಜಯಂತ್ಯುತ್ಸವದ ಯಶಸ್ಸಿಗೆ ಪೂರಕವಾಗಿ ಹಲವು ರೀತಿಯ ಸಲಹೆ ನೀಡಿದರು. ತಾಲೂಕು ಆಡಳಿತದಿಂದ ನಡೆಯುವ ಕೆಂಪೇಗೌಡರ ಜಯಂತ್ಯುತ್ಸವ ಸೇರಿದಂತೆ ಯಾವುದೇ ಜಯಂತಿ, ದಿನಾಚರಣೆಗಳಂತಹ ಸಮಾರಂಭಗಳಲ್ಲಿ ತಾಲೂಕಿನ ಎಲ್ಲಾ ಗ್ರಾಪಂ ಚುನಾಯಿತ ಪ್ರತಿನಿಧಿಗಳೂ ಸಹ ಪಾಲ್ಗೊಳ್ಳುವಂತೆ ತಾಪಂ ಅಧಿಕಾರಿಗಳು ಪಿಡಿಓ ಮೂಲಕ ಮಾಹಿತಿ ಕೊಡಿಸಬೇಕೆಂದು ಆರ್.ಕೃಷ್ಣೇಗೌಡ ಸಲಹೆ ನೀಡಿದರು.ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಪ್ರೊಬೆಷನರಿ ತಹಸೀಲ್ದಾರ್ ಸುಪ್ರಿತ, ಶಿರಸ್ತೇದಾರ್ ಮಲ್ಲಿಕಾರ್ಜುನಸ್ವಾಮಿ, ಚಂದ್ರಶೇಖರ್, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಮಾಜಿ ಸದಸ್ಯ ಹನುಮಂತಯ್ಯ, ಹಿರಿಯ ಸಾಹಿತಿ ಮಹಮ್ಮದ್ ಕಲೀಂಉಲ್ಲಾ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ರಮೇಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕುಮಾರ್, ಮುಖಂಡರಾದ ಗೀತಾ ದಾಸೇಗೌಡ, ಎನ್.ಕೆ.ವಸಂತಮಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
;Resize=(128,128))
;Resize=(128,128))
;Resize=(128,128))