ಸಾರಾಂಶ
ರಂಜಾನ್ ನಿಮಿತ್ತ ಒಂದು ತಿಂಗಳ ಕಾಲ ಕೈಗೊಂಡಿದ್ದ ಉಪವಾಸ ವ್ರತವನ್ನು ಅಂತ್ಯಗೊಳಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ನೂತನ ವಸ್ತ್ರಗಳನ್ನು ಧರಿಸಿ ನೂತನ ಟೋಪಿ, ರುಮಾಲು ಸುತ್ತಿದ್ದ ಚಿಣ್ಣರು, ಯುವಕರು ಎಲ್ಲರ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಈದ್-ಉಲ್- ಫಿತರ್ (ರಂಜಾನ್) ಹಬ್ಬದ ಅಂಗವಾಗಿ ಶ್ರದ್ಧಾ-ಭಕ್ತಿಯಿಂದ ಈದ್ಗಾ ಮೈದಾನ ಮತ್ತು ಮಸೀದಿಗಳಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನಗರದ ಪ್ರಶಾಂತ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕವಾಗಿ ನಮಾಜ್ ಮಾಡಿದರು.ಉಪವಾಸ ವ್ರತ ಅಂತ್ಯಈ ಮೂಲಕ ರಂಜಾನ್ ನಿಮಿತ್ತ ಒಂದು ತಿಂಗಳ ಕಾಲ ಕೈಗೊಂಡಿದ್ದ ಉಪವಾಸ ವ್ರತಾಚರಣೆಯನ್ನು ಅಂತ್ಯಗೊಳಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ನೂತನ ವಸ್ತ್ರಗಳನ್ನು ಧರಿಸಿ ನೂತನ ಟೋಪಿ,ಅರಬ್ ರಾಷ್ಟ್ರಗಳ ಮಾದರಿಯಲ್ಲಿ ರುಮಾಲು ಸುತ್ತಿದ್ದ ಚಿಣ್ಣರು,ಯುವಕರು ಎಲ್ಲರ ಗಮನ ಸೆಳೆದರು.
ಸಾಮೂಹಿಕ ಪ್ರರ್ಥನೆ ಬಳಿಕ ಪರಸ್ಪರ ಆಲಂಗಿಸಿಕೊಂಡು ‘ಈದ್ ಮುಬಾರಕ್’ ಎಂದು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ನಂತರ ಸ್ನೇಹಿತರು ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿ,ರಂಜಾನ್ ಹಬ್ಬದ ಶುಭಶಯ ವಿನಿಮಯ ಮಾಡಿಕೊಂಡರು.ಹಬ್ಬದ ನಿಮಿತ್ತ ಮನೆಗಳಲ್ಲಿ ಗೋಡಂಬಿ, ಪಿಸ್ತಾ, ಬಾದಾಮ, ಕೇರಬೀಜ ಮತ್ತಿತರ ಪದಾರ್ಥಗಳೊಂದಿಗೆ ತಯಾರಿಸಿದ ಸುರಕುಂಬ(ಪಾಯಸ) ಸವಿದರು. ಅಕ್ಕಪಕ್ಕದ ಮನೆಯವರಿಗೂ ಸುರಕುಂಬ ನೀಡಿ,ಸೌಹಾರ್ದತೆ ಮೆರೆದರು.
ಪೊಲೀಸ್ ಬಿಗಿ ಬಂದೋಬಸ್ತ್ಹಬ್ಬದ ಪ್ರಯುಕ್ತ ಡಿವೈಎಸ್ಪಿ ಎಸ್.ಶಿವಕುಮಾರ್ ನೇತೃತ್ವದಲ್ಲಿ ನಗರ ಪೋಲಿಸ್ ಠಾಣೆ ಮತ್ತು .ಸಂಚಾರಿ ಪೋಲಿಸ್ ಠಾಣೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೋಲಿಸರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.