ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪವಿತ್ರ ರಂಜಾನ್ ಹಬ್ಬದ ನಿಮಿತ್ಯ ಪಟ್ಟಣದ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಪ್ರಾರ್ಥನೆಯಲ್ಲಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಪಾಲ್ಗೊಂಡು ಪವಿತ್ರ ರಂಜಾನ್ ಹಬ್ಬದ ಶುಭಾಶಯ ಕೋರಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜಾನ್ ಮಾಸ ಹಾಗೂ ಅದೇ ಅವಧಿಯಲ್ಲಿ ಬರುವ ರಂಜಾನ್ ಹಬ್ಬ ಮುಸ್ಲಿಂ ಸಮುದಾಯದ ಸಹೋದರರ ಅತ್ಯಂತ ಪವಿತ್ರ ಹಬ್ಬ. ಈ ಹಬ್ಬದ ಸಂದೇಶ ನಾವೆಲ್ಲರೂ ಪಾಲಿಸುವುದು ಇಂದಿನ ಅಗತ್ಯವಾಗಿದೆ. ನಾವು ಎಲ್ಲರೂ ಸಹೋದರತೆ, ಶಾಂತಿಯೊಂದಿಗೆ ಸಹಬಾಳ್ವೆ ನಡೆಸುವುದು ಇಂದಿನ ಅಗತ್ಯವಾಗಿದೆ. ರಂಜಾನ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲ ಮುಸ್ಲಿಂ ಬಾಂಧವರೊಂದಿಗೆ ಭಾಗವಹಿಸಿ ಜಗತ್ತಿನ ಕಲ್ಯಾಣ, ಶಾಂತಿ, ಸಾಮರಸ್ಯಕ್ಕಾಗಿ ಅಲ್ಲಾಹುವಿನಲ್ಲಿ ಕೋರಿ ಪ್ರಾರ್ಥನೆ ಸಲ್ಲಿಸಿದೆ ಎಂದರು.
ಚಟ್ಟರಕಿ ಮೌಲಾನ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪಟ್ಟಣದ ಟಿಪ್ಪು ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಈದ್ಗಾ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ರಂಜಾನ್ ಹಬ್ಬಕ್ಕೆ ತೆರೆ ಎಳೆದರು.ಸಾಮೂಹಿಕ ಪ್ರಾರ್ಥನೆಗೆ ಹೋಗಲು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪ್ರಾರ್ಥನೆ ಮುಗಿದ ಬಳಿಕ ಮುಸ್ಲಿಮರು ಗುರು ಹಿರಿಯರು ಮಕ್ಕಳು ಹಾಗೂ ರಾಜಕೀಯ ಮುಖಂಡರು ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯಗಳು ಖುಷಿಯಿಂದಲೇ ವಿನಿಮಯ ಮಾಡಿಕೊಂಡರು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮದಿಂದ ಮುಸ್ಲಿಮರು ಪವಿತ್ರವಾಗಿರುವ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ವೇಳೆ ಮುಖಂಡರುಗಳಾದ ರಿಯಾಜ ಯಲಗಾರ, ಬಸೀರ್ ಅಹ್ಮದ್ ಬೇಪಾರಿ, ಎ.ಡಿ.ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ, ಜಬ್ಬಾರ್ ಮೊಮೀನ ಸೇರಿದಂತೆ ಪಟ್ಟಣದ ಪ್ರಮುಖರು ಭಾಗವಹಿಸಿದ್ದರು.