ರಜೆ ದಿನಗಳು ಮಕ್ಕಳಿಗೆ ಶಿಕ್ಷೆಯಾಗದಿರಲಿ

| Published : Apr 12 2024, 01:03 AM IST / Updated: Apr 12 2024, 01:04 AM IST

ಸಾರಾಂಶ

ಇಂದು ಬಹುತೇಕ ಅಜ್ಜ-ಅಜ್ಜಿ ಇಲ್ಲದ ಮನೆಗಳೇ ಹೆಚ್ಚಿವೆ. ಇಂಥದರಲ್ಲಿ ನಿಜವಾದ ಮಕ್ಕಳ ಕಾಳಜಿಯೊಂದಿಗೆ ನಡೆಸುವ ಮಕ್ಕಳ ಬೇಸಿಗೆ ಶಿಬಿರಗಳು ಅವಶ್ಯವಾಗಿ ಬೇಕಾಗುತ್ತದೆ.

ಧಾರವಾಡ:

ಮಕ್ಕಳು ಯಾವಾಗಲೂ ಚಲನಶೀಲರಾಗಿರುವರು. ರಜೆ ದಿನಗಳು ಅವರಿಗೆ ಶಿಕ್ಷೆಯಾಗದಿರಲಿ, ಅವರು ಈ ದಿನಗಳನ್ನು ಆನಂದದಾಯಕವಾಗಿ ಕಳೆಯುವಂತಾಗಬೇಕು. ವರ್ಷದುದ್ದಕ್ಕೂ ಅಂಕ ಪಡೆಯಲು ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ರಜೆ ದಿನಗಳು ಅವರಲ್ಲಿರುವ ಸೃಜನಶೀಲತೆಗೆ ಇಂಬು ಕೊಡಬೇಕು ಎಂದು ಪ್ರಾಚಾರ್ಯ ಶಶಿಧರ ತೋಡಕರ ನುಡಿದರು.

ಇಲ್ಲಿಯ ಸ್ಕೌಟ್ ಮತ್ತು ಗೈಡ್‌ ಸಂಸ್ಥೆಯ ಆವರಣದಲ್ಲಿ ಪ್ರಾರಂಭವಾದ ಚಿಲಿಪಿಲಿ ಮಕ್ಕಳ ಶಿಕ್ಷಣ ಹಾಗೂ ಸರ್ವಾಂಗೀಣ ಅಭಿವೃದ್ಧಿ ಸಂಸ್ಥೆಯ 22ನೇ ವರ್ಷದ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಬಹುತೇಕ ಅಜ್ಜ-ಅಜ್ಜಿ ಇಲ್ಲದ ಮನೆಗಳೇ ಹೆಚ್ಚಿವೆ. ಇಂಥದರಲ್ಲಿ ನಿಜವಾದ ಮಕ್ಕಳ ಕಾಳಜಿಯೊಂದಿಗೆ ನಡೆಸುವ ಮಕ್ಕಳ ಬೇಸಿಗೆ ಶಿಬಿರಗಳು ಅವಶ್ಯವಾಗಿ ಬೇಕಾಗುತ್ತದೆ. ಅಂಥ ಕಾರ್ಯವನ್ನು ಚಿಲಿಪಿಲಿ ಸಂಸ್ಥೆ ಕಳೆದ 22 ವರ್ಷಗಳಿಂದ ಬೇಸಿಗೆ ಶಿಬಿರ ನಡೆಸಿಕೊಂಡು ಬಂದಿರುವುದು ಅಭಿನಂದನೀಯ. ಮಕ್ಕಳು ಮುಕ್ತವಾಗಿ ಮನಬಿಚ್ಚಿ ಕುಣಿದು ಕುಪ್ಪಳಿಸಿ, ನಕ್ಕು ನಲಿದು ರಜೆ ದಿನಗಳನ್ನು ಆನಂದದಾಯಕವಾಗಿ ಕಳೆಯಿರಿ ಎಂದು ಕಿವಿ ಮಾತು ಹೇಳಿದರು.

ಮಕ್ಕಳ ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಅವರ ತುಂಟಾಟ ನಿಯಂತ್ರಿಸಲಾಗದೆಯೋ, ಮೊಬೈಲ್ ಗೀಳಿಗೆ ಅಂಟಿಕೊಳ್ಳುವ ಭಯದಿಂದಲೋ ಅಥವಾ ಮತ್ತೆ ಯಾವುದೋ ವಿಷಯದ ಕಲಿಕೆಗೆ ಟ್ಯೂಶನ್‌ಗೆ ಹಚ್ಚದೇ ಶಿಬಿರಕ್ಕೆ ಮಕ್ಕಳನ್ನು ಕಳಿಸಿದ್ದು ಅಭಿನಂದನೀಯ. ಆದರೆ ಇಲ್ಲಿ ಮಕ್ಕಳು 20 ದಿನ ಅವರದೇ ಅದ ಹೊಸ ಲೋಕದಲ್ಲಿ ವಿಹರಿಸುವಂತೆ ಚಿಲಿಪಿಲಿ ಸಂಸ್ಥೆ ಸೃಷ್ಟಿ ಮಾಡಲಿದೆ ಎಂದರು.

ಡಾ. ಬಾಳಣ್ಣ ಚಿನಗುಡಿ ಮಾತನಾಡಿದರು. ಚಿಲಿಪಿಲಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಚಿಲಿಪಿಲಿ ಸಂಸ್ಥೆ ಪ್ರತಿ ವರ್ಷ ಪಾಲಕರು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಈ ಬೇಸಿಗೆ ಶಿಬಿರ ಒಂದು ಸಂಸ್ಥೆಯ ಶಿಬಿರ ಎನಿಸದೇ ಎಲ್ಲ ಪಾಲಕರೇ ಸೇರಿ ತಮ್ಮ ಮಕ್ಕಳು ರಜೆದಿನ ಆನಂದದಾಯಕವಾಗಿ ಕಳೆಯುವಂತೆ ಸಂಘಟಿಸಿದ ಶಿಬಿರದಂತೆ ಆಗಿದೆ. ಈ ವರ್ಷವೂ ಪಾಲಕರು ಪಾಲ್ಗೊಳ್ಳಲು ಕೇಳಿಕೊಂಡರು.

ಅಧ್ಯಕ್ಷತೆ ವಹಿಸಿ ಶೈಕ್ಷಣಿಕ ಚಿಂತಕ ಮಕ್ಕಲ್ಲಿಕಾರ್ಜುನ ಚಿಕ್ಕಮಠ, ನಮ್ಮ ಮಕ್ಕಳು ಪುಸ್ತಕದ ಹುಳುವಾಗಬಾರದು. ಹಾಡ ಹೇಳಬೇಕು, ಧೈರ್ಯದಿಂದ ಮಾತಾಡಬೇಕು, ನಾಟಕವಾಡಬೇಕು, ಆಟವಾಡಬೇಕು, ಒಂದಿಷ್ಟು ನೈತಿಕತೆ ಕಲಿತುಕೊಳ್ಳಬೇಕು ಎಂದರು.

ಜನಪದ ಹಿರಿಯ ಕಲಾವಿದೆ ಪ್ರಮಿಳಾ ಜಕ್ಕಣ್ಣವರ ಕಾರ್ಯಕ್ರಮ ನಡೆಸಿಕೊಟ್ಟರು. 125 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸೋಮು ಕಾರಿಗನೂರು, ನೇತ್ರಾ ಪವಾರ ಇದ್ದರು.