ಸಾರಾಂಶ
ಹಿರೇಗೌಜ ಗ್ರಾಮದಲ್ಲಿ ಹಗರಣದ ಹಬ್ಬ, ಬಳಲಿಕ್ಕಮ್ಮ- ಮಲ್ಲಿಗೆಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇವರ ಬಗ್ಗೆ ನಂಬಿಕೆ, ಆಧ್ಯಾತ್ಮದ ಚಿಂತನೆಯಿಂದಾಗಿ ಭಾರತ ದೇಶ ಮತ್ತು ಕನ್ನಡ ನಾಡು ಶಾಂತಿಯಿಂದ ಇವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅಭಿಪ್ರಾಯಪಟ್ಟರು.ಬುಧವಾರ ಹಿರೇಗೌಜ ಗ್ರಾಮದಲ್ಲಿ 10 ದಿನಗಳ ಕಾಲ ನಡೆಯುವ ಹಗರಣದ ಹಬ್ಬ ಹಾಗೂ ಬಳಲಿಕ್ಕಮ್ಮ ಮತ್ತು ಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಆಧ್ಯಾತ್ಮದಲ್ಲಿ ನಂಬಿಕೆ, ಧರ್ಮ, ಸಂಸ್ಕಾರ, ಸಂಸ್ಕೃತಿ ಯಿಂದಾಗಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಹಲವಾರು ಧರ್ಮಗಳಿದ್ದು, ಧರ್ಮದಲ್ಲಿ ಹಲವಾರು ಉಪಜಾತಿಗಳಿವೆ. ಅದನ್ನೆಲ್ಲ ಮೆಟ್ಟಿನಿಂತು ಆಧ್ಯಾತ್ಮಿಕವಾಗಿ ದೇಶವಾಸಿಗಳು ಗಟ್ಟಿಯಾದ ನಿಲುವು ತಾಳಿರುವುದು ಹೆಮ್ಮೆಯ ಸಂಗತಿ ಎಂದರು.ಎಲ್ಲಾ ನಾಗರಿಕರು ಜನ್ಮ ನೀಡಿದ ಭಾರತಾಂಬೆಗೆ ಜೈ ಎನ್ನುತ್ತೇವೆ. ನೀರಿಗೆ ಗಂಗೆ, ದೇಶಕ್ಕೆ ಭಾರತ ಮಾತಾ, ರಾಜ್ಯದಲ್ಲಿ ಜೈ ಭುವನೇಶ್ವರಿ ದೇವಿ ಎನ್ನುತ್ತೇವೆ. ಈ ರೀತಿ ಧರ್ಮದ ಲೇಪನ ನೀಡುವುದೇ ಭಾರತದ ಸಂಸ್ಕೃತಿ ಎಂದು ಹೇಳಿದರು.
ಇದು ಹಗರಣದ ಹಬ್ಬ. 7 ಹಳ್ಳಿಗಳು ಸೇರಿ ಮಾಡುವ ಸಂಭ್ರಮದ ಹಬ್ಬ ಅಲ್ಲ. ಇದೊಂದು ಸೂತಕದ ಹಬ್ಬ. ಊರಿಗಾಗಿ, ನಾಡಿಗಾಗಿ ಮಲಿಗೆಮ್ಮನ ಮಕ್ಕಳಾದ ಹುಲಿಬೀರಯ್ಯ ಮತ್ತು ಕಲಿಬೀರಯ್ಯ ಎಂಬ ಇಬ್ಬರು ಯುವಕರು ಬಲಿದಾನ ಮಾಡಿದ ಕಾರಣಕ್ಕೆ ಹಬ್ಬ ಆಚರಣೆ ಮಾಡಲಾಗುತ್ತಿದೆ.7 ಹಳ್ಳಿಗಳಾದ ಹಿರೇಗೌಜ, ಚಿಕ್ಕಗೌಜ, ಸಾದರಹಳ್ಳಿ, ಕುರಿಚಿಕ್ಕನಹಳ್ಳಿ, ಕರಿಸಿದ್ದನಹಳ್ಳಿ, ಕೆಂಗೇನಹಳ್ಳಿ, ಕಾರೇಹಳ್ಳಿ ಈ ಗ್ರಾಮಸ್ಥರು ಒಂದು ವಾರ ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಿ ಈ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಜೊತೆಗೆ ಈ ಹಬ್ಬ ಶಿಸ್ತನ್ನು ಪಾಲಿಸುವ ಮೂಲಕ ವಿವಿಧ ಹಬ್ಬದ ಖಾದ್ಯಗಳಿಗೆ ನಿಷೇಧವಿರುತ್ತದೆ ಎಂದರು.ಹಿರಿಯರ ಜೊತೆ ಹಬ್ಬದ ಆಚಾರ-ವಿಚಾರಗಳು ಧರ್ಮ ಮತ್ತು ಆಧ್ಯಾತ್ಮದ ಕುರಿತು ಯುವಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಧಾರ್ಮಿಕತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಶ್ರದ್ಧಾಭಕ್ತಿಯಿಂದ ಹಬ್ಬದ ಆಚರಣೆ ನಡೆಯಬೇಕೆಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗತಕಾಲದ ವೈಭವದ ನೆನಪು ಮಾಡಿಕೊಂಡು ಗ್ರಾಮಸ್ಥರಲ್ಲಿ ಒಗ್ಗಟ್ಟು ಮೂಡಿಸಿ ಸಾಂಸ್ಕೃತಿಕ ಶ್ರೀಮಂತಿಕೆ ಇರುವುದರಿಂದ ಭಾರತದಲ್ಲಿ ಹಬ್ಬಗಳು ಇರುವುದು ಜಗತ್ತಿನೆಲ್ಲೆಡೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಸಮೃದ್ಧಿ ಇದ್ದಲ್ಲಿ ಸಂಸ್ಕೃತಿ ಬೆಳೆಯುತ್ತದೆ ಎಂದರು.ಬಲಿದಾನ ಮಾಡಿದವರ ನೆನಪಿನಲ್ಲಿ ಈ ಹಗರಣದ ಹಬ್ಬ ಆಚರಣೆ ಮಾಡುವುದನ್ನು ಪೂರ್ವಿಕರು ಮಾಡಿದ್ದಾರೆ. ದೇವನೊಬ್ಬ ನಾಮ ಹಲವು, ದಯವೇ ಧರ್ಮದ ಮೂಲವಯ್ಯ, ಸಕಲ ಜೀವಾತ್ಮಗಳಿಗೂ ಲೇಸನ್ನೇ ಬಯಸುವ ಎಂಬ ಅರ್ಥದಲ್ಲಿ ಪಂಚಭೂತಗಳನ್ನು ಪೂಜಿಸಲಾಗುತ್ತಿದೆ ಎಂದರು.
ಗ್ರಾ.ಪಂ ಸದಸ್ಯ ಶಿವಕುಮಾರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಸಾಮಂತ ದೊರೆಯ ಆಳ್ವಿಕೆಯಲ್ಲಿ ಸಖರಾಯಪಟ್ಟಣಕ್ಕೆ ಬಂದ ಬಳಿಲಿಕ್ಕವ್ವ ಮತ್ತು ಮಲ್ಲಿಗೆಮ್ಮ ಇವರು ಅಕ್ಕ-ತಂಗಿಯರಾಗಿದ್ದು ಇವರ ಮಕ್ಕಳಾದ ಹುಲಿಬೀರಯ್ಯ, ಕಲಿಬೀರಯ್ಯ ಸೀಗೆ ನಾಡಿನಿಂದ ಹೊಂಬಳ್ಳಿ ಕರಿ ಹರಿದು ತರುವ ಸಂದರ್ಭದಲ್ಲಿ ಬಲಿಯಾಗುತ್ತಾರೆ. ಅದರ ನೆನಪಿನಲ್ಲೇ ಹಗರಣದ ಹಬ್ಬ ಆಚರಿಸುತ್ತಾರೆಂದು ವಿವರಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಶಶಿಕಲಾ, ಹಬ್ಬದ ಆಚರಣೆ ಸಮಿತಿ ಅಧ್ಯಕ್ಷ ಎಚ್.ಎಸ್. ಗಾಂಧಿ, ಯೋಗೀಶ್‌ಗೌಡ, ಸಿ.ಸಿ. ಬಸವೇಗೌಡ, ಚಂದ್ರೇಗೌಡ, ದೇವೇಗೌಡ, ಓಂಕಾರೇಗೌಡ, ರಾಮೇಗೌಡ, ವಿಜಯ್‌ಕುಮಾರ್, ಶೋಭಾರಾಣಿ, ಗೀತಾ, ಹಾಲಪ್ಪ, ಸುರೇಶ್, ಬೀರೇಗೌಡ, ವಿಶಾಲಾಕ್ಷಿ, ಗುರುಮೂರ್ತಿ, ಮಮತ ಉಪಸ್ಥಿತರಿದ್ದರು.