ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಫೆ.೨೪ರಿಂದ ಮಾ.೪ರವರೆಗೆ ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿವಿಧ ಪೂಜಾ ಕೈಂಕರ್ಯ ಸೇರಿದಂತೆ ಹಲವು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಫೆ.೨೪ರಂದು ಬೆಳಗ್ಗೆ ೬.೩೦ಗಂಟೆಗೆ ಶ್ರೀಕ್ಷೇತ್ರದಲ್ಲಿ ಮಹಾ ಪೂಜೆ ಬಳಿಕ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ನಾಂದಿ ಪೂಜೆ ಹಾಗೂ ಧರ್ಮ ಧ್ವಜಾರೋಹಣ ಮಾಡುವ ಮೂಲಕ ೯ದಿನಗಳ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡುವರು. ಅದೇ ದಿನ ಬೆಳಗ್ಗೆ ೧೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ಫೆ.೨೫ರ ಸಂಜೆ ೬ ಗಂಟೆಗೆ ಸರ್ವಾಲಂಕೃತ ಶ್ರೀ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ. ಫೆ.೨೬ರ ಸಂಜೆ ೬ ಗಂಟೆಗೆ ಸರ್ವಾಲಂಕೃತ ಶ್ರೀ ಮಲ್ಲೇಶ್ವರ ಸ್ವಾಮಿ ಉತ್ಸವ ನಡೆಯಲಿದೆ.

ಫೆ.೨೭ರ ಬೆಳಗ್ಗೆ ೯.೩೦ಕ್ಕೆ ಸರಳ ಸಾಮೂಹಿಕ ವಿವಾಹ ಹಾಗೂ ವಿವಾಹವಾಗಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಹಿರಿಯ ದಂಪತಿಗಳಿಂದ ಆಶೀರ್ವಾದದ ವ್ಯವಸ್ಥೆ ಮಾಡಲಾಗಿದೆ. ೫೦ ವರ್ಷಗಳ ಕಾಲ ಜೀವನ ನಡೆಸಿ ಸತಿಪತಿಗಳಾಗಿ ಧನ್ಯೋಗೃಹಸ್ಥಾಶ್ರಮಃ ಎಂಬಂತೆ ಬದುಕಿದ ದಂಪತಿಗಳನ್ನೂ ಶ್ರೀಮಠದ ಪರವಾಗಿ ಸನ್ಮಾನಿಸಲಾಗುವುದು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ೨೧ ವರ್ಷ ಮೇಲ್ಪಟ್ಟ ವರ ಹಾಗೂ ೧೮ ವರ್ಷ ಮೇಲ್ಪಟ್ಟ ವಧುವಿಗೆ ಉಚಿತವಾಗಿ ತಾಳಿ, ಕಾಲುಂಗುರ, ಬಾಗಿನ ಮತ್ತು ವಧು-ವರರಿಗೆ ವಸ್ತ್ರಗಳನ್ನು ನೀಡುವುದರ ಜೊತೆಗೆ ಸಂಬಂಧಿಕರು ಹಾಗೂ ಹಿತೈಷಿಗಳಿಗೆ ಭೋಜನ ವ್ಯವಸ್ಥೆಯನ್ನು ಸಹ ಆಯೋಜಿಸಲಾಗಿದೆ.ಅಂದು ಸಂಜೆ ೬ ಗಂಟೆಗೆ ಸರ್ವಾಲಂಕೃತ ಶ್ರೀ ಸಿದ್ದೇಶ್ವರ ಸ್ವಾಮಿ ಉತ್ಸವ ನಡೆಯಲಿದೆ.


ಫೆ.೨೮ ರ ಸಂಜೆ ೬ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಹೂವಿನ ಪಾಲಕಿ ಉತ್ಸವ. ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮುತ್ತಿನ ಪಾಲಕಿ ಉತ್ಸವ ನಡೆಯಲಿದೆ.

ಮಾ.೧ರ ಬೆಳಗ್ಗೆ ೬.೩೦ಕ್ಕೆ ಶ್ರೀಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚಾಲಂಕಾರ ಪೂಜೆ ಮತ್ತು ಶ್ರೀ ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ನಡೆಯಲಿದೆ. ಅಂದು ಸಂಜೆ ೭.೩೦ಗಂಟೆಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆ ಹಾಗೂ ರಾತ್ರಿ ೮ ಗಂಟೆಗೆಚಂದ್ರಮಂಡಲೋತ್ಸವ ಪೂಜೆ ನಡೆಯಲಿದೆ.

ಮಾ.೨ರ ಬೆಳಿಗ್ಗೆ ಕ್ಷೇತ್ರಾಧಿದೇವತೆಗಳಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಮಹೋತ್ಸವಗಳು ನಡೆಯಲಿದ್ದು, ಸಂಜೆ ೬.೩೦ ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ.ಬಳಿಕ ಶ್ರೀ ಕಾಲಭೈರವೇಶ್ವರ ಸ್ವಾಮಿ ತಿರುಗಣಿ ಉತ್ಸವ, ಪುಷ್ಕರಣಿಯಲ್ಲಿ ತೆಪ್ರೋತ್ಸವ ಹಾಗೂ ಪೌರಾಣಿಕನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮಾ.೩ರ ಮುಂಜಾನೆ ಶ್ರೀ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ಹಾಗೂ ಅಡ್ಡಪಾಲಕಿ ಉತ್ಸವ ಜರುಗಲಿದೆ. ನಾಡಿನಾದ್ಯಂತ ಸಾವಿರಾರು ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಇದೇ ದಿನ ಸಂಜೆ ೬ಗಂಟೆಗೆ ವಿವಿಧ ಗ್ರಾಮಗಳ ನೂರಾರು ಗ್ರಾಮದೇವತೆಗಳ ಉತ್ಸವ ಮೂರ್ತಿಗಳೊಂದಿಗೆ ಗಿರಿ ಪ್ರದಕ್ಷಿಣಿ ನಡೆಯಲಿದೆ. ಬಳಿಕ ಸಂಜೆ ೬ಕ್ಕೆ ಶ್ರೀ ಸೋಮೇಶ್ವರ ಸ್ವಾಮಿ ಉತ್ಸವ ಜರುಗಲಿದೆ.

ಮಾ.೪ರ ಕೊನೆಯ ದಿನ ಶ್ರೀಕ್ಷೇತ್ರದ ಬಿಂದು ಸರೋವರದಲ್ಲಿ ಗಂಗಾ ಪೂಜೆ, ಅವಭೃತ ಸ್ನಾನ ಇತ್ಯಾದಿ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಕಾರ್ಯಕ್ರಮದ ನಂತರ ಧರ್ಮ ಧ್ವಜಾರೋಹಣ ಹಾಗೂ ಸಭಾ ಕಾರ್ಯಕ್ರಮದ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ.

ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ:

ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದ ಆದಿಶಕ್ತಿ ಸಮುದಾಯ ಭವನದ ಆವರಣದಲ್ಲಿ ಮಾ.೧ರಿಂದ ೩ರ ವರೆಗೆ ಮೂರು ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕೃಷಿ ಪರಿಕರ, ಉಪಕರಣಗಳ ಪಂಪನಿ, ರಸಗೊಬ್ಬರ, ಜೈವಿಕರಸಗೊಬ್ಬರ, ಬೀಜೋತ್ಪಾದಕ ಕಂಪನಿ, ಸ್ವ ಸಹಾಯ ಸಂಘಗಳು, ಅಭಿವೃದ್ಧಿಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಇನ್ನಿತರೆ ಆಸಕ್ತರು ಫೆ.೨೭ರೊಳಗೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.