ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ರೈತರನ್ನು ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಮುಂದಾಗಿರುವ ಪೂರಿಗಾಲಿ ಹನಿ ನೀರಾವರಿ ಯೋಜನೆಯ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಕುಂದೂರು ಸುಕ್ಷೇತ್ರ ಶ್ರೀರಸಸಿದ್ದೇಶ್ವರ ಮಠದಲ್ಲಿ ಗುರುಸ್ವಾಮಿ ಅವರ ಒಂಬತ್ತನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಡೆದ ಸಮಗ್ರ ಕೃಷಿ ಕಾರ್ಯಾಗಾರ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬರಡು ಪ್ರದೇಶವಾಗಿರುವ ಬಿ.ಜಿ.ಪುರ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 593 ಕೋಟಿ ರು. ವೆಚ್ಚದಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ಜಾರಿಗೆ ತಂದು 9 ವರ್ಷಗಳು ಕಳೆದರೂ ರೈತರು ಸಮರ್ಪಕವಾಗಿ ಆಸಕ್ತಿ ತೋರದಿರುವುದು ಬೇಸರ ಮೂಡಿಸಿದೆ ಎಂದರು.
ಈಗಾಗಲೇ ಯೋಜನೆಯ ಕಾಮಗಾರಿ ಉದ್ಘಾಟನೆಯ ಹಂತದಲ್ಲಿದ್ದರೂ ಇನ್ನೂ ಹಲವು ರೈತರು ಈ ಯೋಜನೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಬರಡು ಭೂಮಿಯನ್ನು ಹಸಿರು ಕ್ರಾಂತಿಯನ್ನಾಗಿ ಸೃಷ್ಟಿಸುವ ಉದ್ದೇಶದಿಂದ ತಂದಿರುವ ಯೋಜನೆಯಿಂದ ಈಗಾಗಲೇ ಕೆರೆ ಕಟ್ಟೆಗಳನ್ನು ತುಂಬಿಸಿರುವುದರಿಂದ ಈ ಭಾಗದಲ್ಲಿ ಅಂತರ್ಜಲ ಹೆಚ್ಚಿದೆ ಎಂದರು.ಪೂರಿಗಾಲಿ ಹನಿ ನೀರಾವರಿ ವ್ಯಾಪ್ತಿಗೆ ಬರುವ ಬಿಜಿಪುರ ಹೋಬಳಿಯ ಎಲ್ಲ ನೀರು ಬಳಕೆದಾರರು ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದುವ ಮೂಲಕ ಈ ಯೋಜನೆಯ ಉಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು. ಕೃಷಿಯಿಂದ ನಮ್ಮ ಜನರ ಬದುಕು ಉತ್ತಮವನ್ನಾಗಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಸಾಧ್ಯವಾದರೆ ಸ್ವಾಮೀಜಿಗಳು ಸಹ ಪೂರಿಗಾಲಿ ಹನಿ ನೀರಾವರಿ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ಭೂಮಿ ಉಸಿರಾಡಬೇಕು ಭೂಮಿಗೂ ಸಹ ಆಮ್ಲಜನಕ ಬೇಕು. ಭೂಮಿ ಬದುಕಿದರೆ ಬೆಳೆ ಉತ್ತಮವಾಗುತ್ತದೆ. ಬೆಳೆ ಉತ್ತಮವಾದ ನಮ್ಮ ರೈತರ ಬದುಕು ಹಸನಾಗುತ್ತದೆ ಎನ್ನುವುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಶಿಕ್ಷಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಿಂತಲೂ ನಮ್ಮ ಸರ್ಕಾರಿ ಶಾಲೆಯನ್ನು ಉತ್ತಮಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಶಿಕ್ಷಣದ ವ್ಯವಸ್ಥೆಯನ್ನು ಸರ್ಕಾರಿ ಶಾಲೆಯಲ್ಲಿ ಜಾರಿ ಮಾಡಲಾಗುತ್ತಿದೆ. ಅಲ್ಲದೇ ಮಲ್ಟಿಮೀಡಿಯಾ ಸೆಂಟರ್ ಸಹ ತೆರೆಯಲಾಗಿದ್ದು, ತಮ್ಮ ಮಕ್ಕಳಲ್ಲಿ ಜ್ಞಾನ ವೃದ್ಧಿಸುವುದರ ಜೊತೆಗೆ ಅತಿ ಹೆಚ್ಚಿನ ಅಂಕಗಳನ್ನು ಪಡೆಯಲು ಪೂರಕವಾಗಿರುತ್ತದೆ ಎಂದರು.
ಕಾರ್ಯಾಗಾರದಲ್ಲಿ ಯೋಗೇಶ್ವರಿ ಎಂ.ಪರಮೇಶ್, ಎಂ.ವೆಂಕಟೇಶ್ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶಾಂತರಾಜು ರೈತರಿಗೆ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಕನಕಪುರ ದೇಗುಲಮಠದ ಚನ್ನಬಸವ ಸ್ವಾಮೀಜಿ, ಕುಂದೂರು ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ, ಕಿರಿಯ ರುದ್ರಮುನೇಶ್ವರ ಸ್ವಾಮೀಜಿ, ಮುಡುಕನಪುರ ಮಠದ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಮುಖಂಡರಾದ ಬಬ್ರುವಾಹನ, ತಾಂಡವಮೂರ್ತಿ, ಮಲ್ಲೇಶ, ವೃಷಭೇಂದ್ರ, ಪುಟ್ಟಬುದ್ದಿ, ವಿರೂಪಾಕ್ಷಪ್ಪ ಹಾಗೂ ತಾಲೂಕಿನ ವಿವಿಧ ಮಠಗಳ ಹರಗುರು ಚರಮೂರ್ತಿಗಳು ಪಾಲ್ಗೊಂಡಿದ್ದರು.ನೀರಿನ ವ್ಯವಸ್ಥೆಗೆ ಚಾಲನೆ
ಕುಂದೂರು ಬೆಟ್ಟಕ್ಕೆ ಬರುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಮಠದ ಕುಲಬಾಂಧವರು ಮಾಡಿರುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿ ಅವರು ಮಾತನಾಡಿ, ಸುಮಾರು 1200 ವರ್ಷಗಳ ಇತಿಹಾಸ ಇರುವ ಹರೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಅರ್ಚಕರು ಕೆಳಗಡೆಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ದೇವರನ್ನು ಸ್ವಚ್ಛಗೊಳಿಸಬೇಕಾಗಿತ್ತು, ಆದರೆ ಇದೀಗ ಅವಕ್ಕೆ ಅನುಕೂಲವಾಗಿದೆ ಎಂದರು.4 ಲಕ್ಷ ರು.ವೆಚ್ಚದಲ್ಲಿ 800 ಅಡಿ ಪೈಪ್ ಲೈನ್ ಮಾಡಿಸಿ, ನೀರಿನ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸುವಂತೆ ಮಾಡಿದ್ದಾರೆ. ಈ ಕಾರ್ಯ ಇತರರಿಗೆ ಮಾದರಿಯಾಗಿದೆ. ಮೆಟ್ಟಿಲುಗಳ ನಿರ್ಮಾಣಕ್ಕೆ 10 ಲಕ್ಷ ರು.ನೀಡಲಾಗಿದೆ. ಮುಂದಿನ ದಿನಗಳಲ್ಲೂ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು.