ಬಾಳೆಹೊನ್ನೂರಲ್ಲಿ ಪ್ರತಿಭಟನಾ ಸಭೆ । ನಿರಪರಾದಿಗಳ ಮೇಲಿನ ಕೇಸ್ ವಾಪಾಸ್ಸಿಗೆ ಆಗ್ರಹ । ಸಂಸದ ಕೋಟಾ, ಮಾಜಿ ಸಚಿವ ಜೀವರಾಜ್ ಭಾಗಿಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ವ್ಯಕ್ತಿ ಹಾಗೂ ಮಲೆನಾಡಿನ ಪರವಾಗಿ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಿರುವ ರೈತರು ಹಾಗೂ ಕಾರ್ಮಿಕರ ಮೇಲೆ ಭಾನುವಾರ ನಡೆದ ಲಾಠಿ ಚಾರ್ಜ್ ಹಾಗೂ ಹೋರಾಟಗಾರರನ್ನು ಬಂಧಿಸಿರುವ ಕ್ರಮ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಕ್ಷೇತ್ರ ಬಂದ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ಷೇತ್ರಾದ್ಯಂತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚುವ ಮೂಲಕ ಯಶಸ್ವಿಯಾಗಿದೆ.ಚಿಕ್ಕಮಗಳೂರು ತಾಲೂಕಿನ ಕಡಬಗೆರೆಯಲ್ಲಿ ಭಾನುವಾರ ಆನೆ ದಾಳಿಯಿಂದ ಮೃತಪಟ್ಟ ಕಾರ್ಮಿಕ ಮಹಿಳೆ ಬೋರಮ್ಮ ಶವವಿಟ್ಟು ಪ್ರತಿಭಟಿಸಿ ಶವವನ್ನು ಸಂಜೆಯಾದರೂ ಬಿಟ್ಟು ಕೊಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಟಿ, ಶಾಸಕರು ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಬಗ್ಗದಾಗ ಲಾಠಿ ಚಾರ್ಜ್ ನಡೆಸಿ, ಹಲವರನ್ನು ಬಂಧಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಬಂದ್‌ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳ ಮಾಲೀಕರು, ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಿ ಬೆಂಬಲಿಸಿದರು. ಕ್ಷೇತ್ರ ರೈತ ಒಕ್ಕೂಟ, ಬಿಜೆಪಿ, ಜೆಡಿಎಸ್, ಆಟೋ ಚಾಲಕರು, ವರ್ತಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ಜೇಸಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ರೈತಪರ ಹೋರಾಟಗಾರರು, ಮುಖಂಡರು ಲಾಠಿ ಚಾರ್ಜ್, ಅಮಾಯಕರ ಬಂಧನ ಹಾಗೂ ನಿರಪರಾಧಿಗಳ ಮೇಲಿನ ಸ್ವಯಂಪ್ರೇರಿತ ಸುಳ್ಳು ಕೇಸು ದಾಖಲನ್ನು ಖಂಡಿಸಿ, ಶಾಸಕ ಟಿ.ಡಿ.ರಾಜೇಗೌಡ ನೇತೃತ್ವದಲ್ಲಿ ನಡೆದ ಲಾಠಿ ಚಾರ್ಜ್ ಕೇಸು ವಾಪಾಸ್ಸು ಪಡೆಯುವಂತೆ ಆಗ್ರಹಿಸಿದರು.ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಕೋಟಾ ಶ್ರೀನಿವಾಸಪೂಜಾರಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್.ಶೆಟ್ಟಿ, ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ, ಗೌರವಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕ್ಷೇತ್ರ ಪ್ರ. ಕಾರ್ಯದರ್ಶಿ ರಂಜಿತ್ ಶೃಂಗೇರಿ, ರತ್ನಾಕರ ಗಡಿಗೇಶ್ವರ, ಪ್ರಸನ್ನಕುಮಾರ್ ಕಿಬ್ಳಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ದಿನೇಶ್ ಹೊಸೂರು, ಟಿ.ಎಂ.ಉಮೇಶ್, ಎಂ.ಜೆ.ಚಂದ್ರಶೇಖರ್, ಪ್ರದೀಪ್ ಕಿಚ್ಚಬ್ಬಿ, ಪುಣ್ಯಪಾಲ್, ಸಂತೋಷ್ ಅರನೂರು, ಜಗದೀಶ್ಚಂದ್ರ, ಕೋಕಿಲಮ್ಮ ಮತ್ತಿತರರು ಭಾಗಿಯಾಗಿ ಪ್ರತಿಭಟನಾ ನಿರತರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಡಳಿತ, ಸರ್ಕಾರದ ನಡೆ ಖಂಡಿಸಿದರು. ಪ್ರತಿಭಟನಾ ಸ್ಥಳದಲ್ಲೇ ಹೋರಾಟಗಾರರು ಮನವಿ ಪತ್ರಕ್ಕೆ ಸಹಿ ಸಂಗ್ರಹ ನಡೆಸಿದರು. ಜಿಲ್ಲಾ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಬಾಳೆಹೊನ್ನೂರು ಠಾಣೆಯಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ಅವಲೋಕಿಸಿದರು. ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ರಕ್ಷಣೆ ಒದಗಿಸಲಾಗಿತ್ತು. (ಬಾಕ್ಸ್)
ಶಾಸಕರೇ ನಿಂತು ಮಾಡಿಸಿದ ಮೊದಲ ಲಾಠಿ ಚಾರ್ಜ್ ದೇಶದ ಇತಿಹಾಸದಲ್ಲಿ ಶಾಸಕರೇ ನಿಂತು ಮಾಡಿಸಿದ ಮೊದಲ ಲಾಠಿ ಚಾರ್ಜ್ ಇದಾಗಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.ಶಾಸಕ ರಾಜೇಗೌಡರು ಅಧಿಕಾರದ ಅಹಂನಲ್ಲಿ ರೌಡಿ ರೀತಿ ಹೋರಾಟಗಾರರ ಮೇಲೆ ಕೈ ಎತ್ತಲು ಹೋಗಿದ್ದಾರೆ. ಶಾಸಕರ ನಿಜವಾದ ಮುಖದರ್ಶನ ಇದೀಗ ಆಗಿದೆ. ಅವರಿಗೆ ಇಚ್ಛಾಶಕ್ತಿಯಿದ್ದಿದ್ದರೆ ₹20 ಲಕ್ಷ ಪರಿಹಾರದೊಂದಿಗೆ ಸಿಎಂ ಪರಿಹಾರ ನಿಧಿ ಯಿಂದ ₹5ಲಕ್ಷ ಕೊಡಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ ಅಮಾಯಕರ ಮೇಲೆ ಲಾಠಿ ಬೀಸಲು ಹೇಳಿ ಮಜಾ ತೆಗೆದು ಕೊಂಡಿದ್ದಾರೆ.ಕಾರ್ಮಿಕ ಮಹಿಳೆ ಸಾವು ಉದ್ದೇಶಿತ ಕೊಲೆ ಎಂದು ನಾನು ಆರೋಪಿಸುತ್ತೇನೆ. ಕುಮ್ಕಿ ಆನೆಗಳು ಬಂದು 3 ದಿನದಲ್ಲಿ ಹಿಡಿಯಲಾಗದ ಕಾಡಾನೆಯನ್ನು ಆಕೆ ಮೃತಪಟ್ಟ ಅರ್ಧ ಗಂಟೆಯಲ್ಲಿ ಹೇಗೆ ಸೆರೆ ಹಿಡಿದರು. ಇದೀಗ ಹಿಡಿದಿರುವ ಆನೆ ನಿಜ ವಾದ ಕಾಡಾನೆಯೋ? ಅಥವಾ ಕುಮ್ಕಿ ಆನೆಗೆ ಅರವಳಿಕೆ ಹೊಡೆದು ಕಾಡಾನೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ಶಾಸಕರು ರೈತರಿಗೆ ಸಾಗುವಳಿ ಚೀಟಿ ನೀಡುವ ಆದೇಶ ಕೊಡುವ ಬದಲು, ಲಾಠಿ ಚಾರ್ಜ್ ಆದೇಶ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.(ಬಾಕ್ಸ್)
ಕಾಂಗ್ರೆಸ್ ಉಳಿವಿಗೆ ಲಾಠಿ ಚಾರ್ಜ್ ಕಾಂಗ್ರೆಸ್ ಪಕ್ಷ ತನ್ನ ಉಳಿವಿಗಾಗಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಎಸ್.ಶೆಟ್ಟಿ ಹೇಳಿದರು.ಕ್ಷೇತ್ರದಲ್ಲಿ ಗೂಂಡಾ ರಾಜ್ಯ ನಿರ್ಮಾಣವಾಗಿದ್ದು, ಇವರ ಗೂಂಡಾ ವರ್ತನೆ, ಗೊಡ್ಡು ಬೆದರಿಕೆಗೆ ಬಗ್ಗಲ್ಲ. ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕಿದೆ. ಕುಟುಂಬದ ಒಬ್ಬರಿಗೆ ಖಾಯಂ ಉದ್ಯೋಗ ಕೊಡಿ ಎಂದರೆ ಪೊಲೀಸರ ಲಾಠಿಗೆ ಕೆಲಸ ಕೊಡಲಾಗಿದೆ. ಜಿಲ್ಲಾಡಳಿತ ಯಾರಿಗೆಲ್ಲ ಕೇಸು ಹಾಕಿ ಜೈಲಿಗೆ ಕಳುಹಿಸಬೇಕು ಎಂದು ಕೊಂಡಿದೆಯೋ ಅವರಿಗೆಲ್ಲ ನಾವು ವಕೀಲರನ್ನು ನೇಮಿಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ರೈತರ ಜೀವನಕ್ಕಾಗಿ ನಾವು ರಾಜಕಾರಣ ಮಾಡುತ್ತಿದ್ದೇವೆ ಹೊರತು, ಚುನಾವಣೆಗೆ ರಾಜಕಾರಣ ಮಾಡುತ್ತಿಲ್ಲ. ಶೃಂಗೇರಿ ಕ್ಷೇತ್ರದ ರೈತರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ. ಅರಣ್ಯ ಸಚಿವರಿಗೆ ಇಚ್ಛಾಶಕ್ತಿ ಇದ್ದರೆ ಕೂಡಲೇ ಸಮನ್ವಯ ಸಮಿತಿ ರಚಿಸಿ ಕ್ಷೇತ್ರದಲ್ಲಿ ಒಂದು ಸಭೆ ಮಾಡಿ. ಇಲ್ಲದಿದ್ದಲ್ಲಿ ಕ್ಷೇತ್ರಕ್ಕೆ ಅರಣ್ಯ ಸಚಿವರು ಬಂದಾಗ ಕಪ್ಪು ಬಟ್ಟೆ ಪ್ರದರ್ಶಿಸುವುದು ಖಚಿತ ಎಂದರು. ಸಮಸ್ಯೆ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೂ ತಿಳಿಸಿದ್ದು, ರೈತರ ಸಭೆ ಕರೆಯಲು ತಿಳಿಸಿದ್ದಾರೆ. ರೈತರ ಜೊತೆಗೆ ಸದಾ ನಾವಿದ್ದೇವೆ ಎಂದು ಹೇಳಿದರು.(ಬಾಕ್ಸ್)
ಕೇಂದ್ರದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಶೃಂಗೇರಿ ಕ್ಷೇತ್ರದ ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಅರಣ್ಯ ಸಚಿವ ಭೂಪೇಶ್ ಯಾದವ್ ರೊಂದಿಗೆ ಚರ್ಚಿಸಿದ್ದು, ಶಾಶ್ವತ ಪರಿಹಾರ ನೀಡಲು ಒತ್ತಾಯಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ರಾಜ್ಯದ ಅರಣ್ಯ ಸಚಿವರು ಆನೆಗಳು ಕಾಡಿನಿಂದ ಹೊರ ಬರದಂತೆ ತಡೆಯಲು ಈಗಾಗಲೇ 32 ಜನರ ಟಾಸ್ಕ್ ಫೋರ್ಸ್ ರಚಿಸುವ ಭರವಸೆ ನೀಡಿದ್ದಾರೆ. ಅದು ಶೀಘ್ರ ಆಗಬೇಕಿದೆ. ನ್ಯಾಯ ಕೇಳಿದವರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಆ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕಿದೆ. ನಿರಪರಾಧಿಗಳ ಮೇಲೆ ಹಾಕಿದ ಕೇಸಿಗೆ ಕೂಡಲೇ ಬಿ ರಿಪೋರ್ಟ್ ಹಾಕಬೇಕು. ಕೇಸ್ ವಾಪಾಸ್ ಪಡೆಯದಿದ್ದಲ್ಲಿ ಪಕ್ಷಾತೀತ ವಾಗಿ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಆನೆ ದಾಳಿ ಶಾಶ್ವತ ಪರಿಹಾರಕ್ಕೆ ಕೇಂದ್ರ ಸರ್ಕಾರದ ಗಮನಸೆಳೆದಿದ್ದು, ಅಲ್ಲಿಂದ ಏನು ಮಾಡಬೇಕೋ, ಅಲ್ಲಿಂದ ಇದಕ್ಕೆ ಯಾವ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಸರ್ಕಾರಕ್ಕೂ ಕೇಂದ್ರ ದಿಂದ ಅಗತ್ಯ ನೆರವು ನೀಡಲಾಗುವುದು. ಕಾಡಾನೆ ದಾಳಿಗೆ ಎಲ್ಲೂ ಸಹ ಕೇಂದ್ರದಿಂದ ಪರಿಹಾರ ಕೊಟ್ಟ ಉದಾಹರಣೆ ಇಲ್ಲ ಎಂದು ಹೇಳಿದರು.(ಬಾಕ್ಸ್)
ಕಲ್ಲು ಹೊಡೆಯುವವರಲ್ಲ ನಾವು: ಹೂವ ಹಾಕುವವರು ಪ್ರತಿಭಟನಾ ಸಭೆ ಮುಗಿದ ಬಳಿಕ ಹೋರಾಟಗಾರರು ಹಾಗೂ ಮುಖಂಡರು ಜೇಸಿ ವೃತ್ತದ ಬಳಿ ನಿಂತಿದ್ದ ಕೆಎಸ್‌ಆರ್‌ಪಿ ಬಸ್‌ಗೆ ಹೂ ಹಾಕಿ ಪುಷ್ಪ ನಮನ ಸಲ್ಲಿಸಿ ನಾವುಗಳು ಕಲ್ಲು ಹೊಡೆಯುವವರಲ್ಲ. ಬದಲಾಗಿ ಹೂ ಹಾಕುವವರು ಎಂದು ಘೋಷಣೆ ಕೂಗಿದರು. ಸಮೀಪದ ಠಾಣೆಯಲ್ಲಿ ನಿಂತಿದ್ದ ಪೊಲೀಸರ ಮೇಲೂ ಜೀವರಾಜ್, ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ತೆರಳಿ, ಹೂ ಎರಚಿದರು. ಸ್ಥಳದಲ್ಲೆ ಇದ್ದ ಅಡಿಷನಲ್ ಎಸ್ಪಿ ಜಯಕುಮಾರ್ ಹೋರಾಟಗಾರರ ಬಳಿಗೆ ಬಂದು ದಯಮಾಡಿ ಹೂ ಎರಚಬೇಡಿ. ಇದು ಇನ್ನೊಂದು ರೀತಿ ತಿರುವು ಪಡೆಯಲಿದೆ ಎಂದು ಮಾಜಿ ಶಾಸಕ ಜೀವರಾಜ್‌ಗೆ ಹೇಳಿದರು. ಪ್ರತಿಕ್ರಿಯಿಸಿದ ಜೀವರಾಜ್ ನಾವು ಕಲ್ಲು ಹೊಡೆಯುವವರಲ್ಲ. ಹೂ ಹಾಕುವವರು ಎಂದು ಸಮಜಾಯಿಷಿ ನೀಡಿದರು.ಫೋಟೋ ವಿವರ೨೩ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ನಡೆದ ಲಾಠಿ ಚಾರ್ಜ್ ಖಂಡಿಸಿ ಪಟ್ಟಣದ ಜೇಸಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜೀವರಾಜ್, ಸುಧಾಕರ್ ಶೆಟ್ಟಿ, ವಿಶ್ವನಾಥ್ ಗದ್ದೆಮನೆ ಮತ್ತು ಮಲೆನಾಡು ರೈತ ನಾಗರೀಕ ಹಿತರಕ್ಷಣಾ ಸಮಿತಿ ಸದಸ್ಯ ಭಾಗವಹಿಸಿದ್ದರು.೨೩ಬಿಹೆಚ್‌ಆರ್ ೨: ಬಾಳೆಹೊನ್ನೂರಿನಲ್ಲಿ ನಡೆದ ಶೃಂಗೇರಿ ಕ್ಷೇತ್ರ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯ ರಸ್ತೆಯು ಜನ ಸಂಚಾರವಿಲ್ಲದೆ ಬಿಕೋ ಎನ್ನುತಿತ್ತು.೨೩ಬಿಹೆಚ್‌ಆರ್ ೩: ಪೊಲೀಸರ ಕೆಎಸ್‌ಆರ್‌ಪಿ ವಾಹನಕ್ಕೆ ಹೂ ಹಾಕಿ ಪುಷ್ಪ ನಮನ ಸಲ್ಲಿಸಿದ ಪ್ರತಿಭಟನಾನಿರತರು.೨೩ಬಿಹೆಚ್‌ಆರ್ ೪: ಪ್ರತಿಭಟನಾನಿರತದೊಂದಿಗೆ ಅಡಿಷನಲ್ ಎಸ್ಪಿ ಜಯಕುಮಾರ್ ಮಾತನಾಡಿದರು.