ಚಲುವರಾಯಸ್ವಾಮಿಗೆ ಅಧಿಕಾರ, ಹಣದ ಮದ ಬಡವರ ಕಷ್ಟ ಅರ್ಥವಾಗಲ್ಲ: ಎಚ್.ಡಿ.ಕುಮಾರಸ್ವಾಮಿ

| Published : Jan 06 2025, 01:00 AM IST / Updated: Jan 06 2025, 01:49 PM IST

ಚಲುವರಾಯಸ್ವಾಮಿಗೆ ಅಧಿಕಾರ, ಹಣದ ಮದ ಬಡವರ ಕಷ್ಟ ಅರ್ಥವಾಗಲ್ಲ: ಎಚ್.ಡಿ.ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರ ಮತ್ತು ಹಣದ ಮದದಿಂದ ಆಕಾಶದಲ್ಲಿ ಹಾರಾಡುತ್ತಿರುವ ಸಚಿವ ಚಲುವರಾಯಸ್ವಾಮಿ ಅವರಿಗೆ ಬಡವರ ಕಷ್ಟದ ವಾಸ್ತವಾಂಶ ಅರ್ಥವಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಮದ್ದೂರು :ಅಧಿಕಾರ ಮತ್ತು ಹಣದ ಮದದಿಂದ ಆಕಾಶದಲ್ಲಿ ಹಾರಾಡುತ್ತಿರುವ ಸಚಿವ ಚಲುವರಾಯಸ್ವಾಮಿ ಅವರಿಗೆ ಬಡವರ ಕಷ್ಟದ ವಾಸ್ತವಾಂಶ ಅರ್ಥವಾಗುವುದಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಿಧನರಾದ ಮಾಜಿ ಶಾಸಕಿ ಜಯವಾಣಿ ಮಂಚೇಗೌಡ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಪುತ್ರ ಮಾಜಿ ಶಾಸಕ ಡಾ.ಮಹೇಶ್‌ಚಂದ್ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಜನರ ಮಾಂಸಾಹಾರ ಸೇವನೆಯನ್ನು ಬಸ್ ದರ ಏರಿಕೆಗೆ ಹೋಲಿಕೆ ಮಾಡಿರುವ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಕೂಲಿ-ನಾಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರು ತಮ್ಮ ಆರ್ಥಿಕತೆಯ ಇತಿ-ಮಿತಿ ಅರಿತುಕೊಂಡು ಮಾಂಸಹಾರ ತಿನ್ನುತ್ತಾರೆ. ಆದರೆ, ಬಸ್ ದರ ಏರಿಕೆ ಮಾಂಸಹಾರಕ್ಕೆ ಹೋಲಿಕೆ ಮಾಡಿ ಜನಸಾಮಾನ್ಯರ ಆಹಾರದ ಬಗ್ಗೆ ಲಘುವಾಗಿ ಮಾತನಾಡಿರುವ ಚಲುವರಾಯಸ್ವಾಮಿ ಅವರು ಈಗ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಅವರಿಗೆ ನೆಲವೇ ಕಾಣುತ್ತಿಲ್ಲ. ಕೆಳಗಿಳಿದು ಬಂದರೆ ಆತನಿಗೆ ಜನ ಸಾಮಾನ್ಯರ ಸಮಸ್ಯೆಗಳು ಅರ್ಥವಾಗುತ್ತವೆ. ಇಂತಹ ಲಘು ಮಾತುಗಳಿಗೆ ಜನರೇ ಮುಂದೊಂದು ದಿನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಈಗ ಬಸ್ ದರ ಏರಿಕೆಗೆ ಕೈ ಹಾಕಿ ಜನರ ಜೇಬಿನ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಇವರು ಇನ್ನಾವ ಗ್ಯಾರಂಟಿ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಈಗಾಗಲೇ ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ಹಲವು ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಈಗ ಬಸ್ ದರ ಏರಿಕೆ ಮಾಡದೆ ವಿಧಿ ಇರಲಿಲ್ಲ. ಇದು ಮುಂದಿನ ದಿನಗಳಲ್ಲಿ ಎಂತಹ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಾಗುತ್ತದೆ. ಇದಕ್ಕೆ ರೊಚ್ಚಿಗೆದ್ದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಉತ್ತರಿಸಿದರು.

ಈ ವೇಳೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಸುರೇಶ್‌ಗೌಡ, ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್‍ಯದರ್ಶಿ ಬಿಳಿಯಪ್ಪ, ರಾಜ್ಯ ವಕ್ತಾರ ಮಹೇಶ್, ಜಿಲ್ಲಾಧ್ಯಕ್ಷ ಡಿ. ರಮೇಶ್, ತಾಲೂಕು ಕಾರ್‍ಯಾಧ್ಯಕ್ಷ ಮಾದನಾಯನಕಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಕೆ.ಟಿ. ರಾಜಣ್ಣ, ಕೂಳಗೆರೆ ಶೇಖರ್ ಮತ್ತಿತರರಿದ್ದರು.

ಜಯವಾಣಿ ಮಂಚೇಗೌಡರ ಕುಟುಂಬಕ್ಕೆ ಎಚ್ಡಿಕೆ ಸಾಂತ್ವನ

ಮದ್ದೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ನಿಧನರಾದ ಮಾಜಿ ಶಾಸಕಿ ಜಯವಾಣಿ ಮಂಚೇಗೌಡ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪದ ಡಾ.ಜಯವಾಣಿ ಮಂಚೇಗೌಡ ನಿವಾಸಕ್ಕೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಕೆ.ಸುರೇಶ್‌ಗೌಡ, ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ತೆರಳಿ ಪುತ್ರ ಮಾಜಿ ಶಾಸಕ ಡಾ. ಮಹೇಶ್ ಚಂದ್, ಜಿಪಂ ಮಾಜಿ ಸದಸ್ಯ ಎಂ.ಸ್ವರೂಪ್ ಚಂದ್ , ಸಹೋದರರಾದ ಪ್ರಫುಲ್ಲಾಚಂದ್ ಸೇರಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್‍ಯ ತುಂಬಿದರು.

ಈ ವೇಳೆ ಮಾತನಾಡಿದ ಸಚಿವ ಕುಮಾರಸ್ವಾಮಿ, ಮದ್ದೂರು ಕ್ಷೇತ್ರದಲ್ಲಿ ದಿ.ಮಂಚೇಗೌಡರ ಕುಟುಂಬ ತಮ್ಮದೇ ಆದಂತಹ ವ್ಯಕ್ತಿತ್ವ ಹೊಂದಿದ್ದರು. ಮಂಚೇಗೌಡ ಮತ್ತು ಅವರ ಪತ್ನಿ ಜಯವಾಣಿ ಮಂಚೇಗೌಡ, ಪುತ್ರ ಡಾ. ಮಹೇಶ್‌ಚಂದ್ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಕ್ಷೇತ್ರದ ಜನರು ಇಂದೂ ಸಹ ಅವರ ಕುಟುಂಬದ ಪರವಾಗಿ ನಿಂತಿದ್ದಾರೆ ಎಂದು ಅಭಿಪ್ರಾಯಿಸಿದರು.