ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭರತ ಭೂಮಿ ನೆಲವು ಪುಣ್ಯ, ಭವ್ಯ ಇತಿಹಾಸ ಹೊಂದಿದೆ. ಅಪಾರವಾದ ಜ್ಞಾನ ಸಂಪತ್ತು, ಸಂಸ್ಕಾರ ಇದೆ. ಪಾಶ್ಚಿಮಾತ್ಯಕ್ಕೆ ಮಾರು ಹೋಗುವುದು ತರವಲ್ಲ. ನಮ್ಮ ನೆಲದ ವಿಚಾರಧಾರೆಗಳು ಶ್ರೇಷ್ಠವಾಗಿದೆ ಎನ್ನುವುದು ಎಲ್ಲರು ಅರಿತುಕೊಳ್ಳಬೇಕು ಎಂದು ರಾಷ್ಟ್ರ ಸೇವಿಕಾ ಸಮಿತಿ ವಿಜಯನಗರ ಪ್ರಾಂತ ಸಹ ಕಾರ್ಯವಾಹಿಕಾ ಆಶಾ ನಾಯಕ ಹೇಳಿದರು.ನಗರದ ಬಿವಿವಿ ಸಂಘದ ರೇಣುಕಾಚಾರ್ಯ ಮಂಗಲಭವನದಲ್ಲಿ ಭಾನುವಾರ ರಾಷ್ಟ್ರ ಸೇವಿಕಾ ಸಮಿತಿ ಹಮ್ಮಿಕೊಂಡಿದ್ದ ಮಹಿಳೆಯರ ಪಥ ಸಂಚಲನ ಸಮಾರೋಪದಲ್ಲಿ ಮಾತನಾಡಿದ ಅವರು, ನಮ್ಮತನ ಕಳೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಸ್ಮಿತೆಗೆ ನಾವೇ ಧಕ್ಕೆ ತಂದುಕೊಳ್ಳುವುದು ಸರಿಯಾದ ನಿಲುವು ಅಲ್ಲ. ಕಣ ಕಣದಲ್ಲಿಯೂ ಅಡಗಿರುವ ಗಮ್ಯ ಇತಿಹಾಸವನ್ನು ಜಾಗೃತಿಗೊಳಿಸಬೇಕು. ಸೇವೆ, ಸಂಸ್ಕಾರ, ಆಚಾರ, ವಿಚಾರ, ಧಾರ್ಮಿಕ ತಳಹದಿಯಲ್ಲಿ ದೇಶವನ್ನು ರೂಪಿಸಲಾಗಿದೆ ಎಂದರು.
ಜಾಗೃತಿಗೊಳಿಸುವ ನಿಟ್ಟಿನಲ್ಲಿ ಪಥಸಂಚಲನ ಗುರಿ ಒಂದೇ ಇದೆ. ಒಂದೇ ಗುರಿಯಲ್ಲಿ ನಾವೆಲ್ಲ ಚಲಿಸಬೇಕು. ಬಾಗಲಕೋಟೆ ಪಥ ಸಂಚಲನದ ಉತ್ಸಾಹ ಗಮನಿಸಿದರೇ ಹೊಸ ಉತ್ತೇಜನ, ಉತ್ಸಾಹ ಮೂಡಿದೆ. ಇದು ಸಹಸ್ರ ಸಂಖ್ಯೆಯಲ್ಲಿ ಸೇರುವಂತಾಗಬೇಕು. ಚಿಕ್ಕ ಮಕ್ಕಳಿಗೆ ಈಗಿನಿಂದ ಕಲಿಸಿಕೊಡಬೇಕು. ಆಲದ ಮರದಂತೆ ನಮ್ಮ ವಿಚಾರಧಾರೆಗಳು ವಿನ್ಯಾಸಗೊಳ್ಳಬೇಕು. ಅವುಗಳು ವಿವೇಕದಿಂದ ಕೂಡಿರಬೇಕು. ಧರ್ಮ ಚೌಕನಿಟ್ಟಿನಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ಪತ್ರಕರ್ತರಾದ ರಕ್ಷಾ ದೇಶಪಾಂಡೆ ಮಾತನಾಡಿ, ಇಂದಿನ ಪಥಸಂಚಲನವು ನಮ್ಮ ಸಂಸ್ಕೃತಿ, ಪರಂಪರೆ ಸಾಕ್ಷೀಕರಿಸಿತು. ಚಿಕ್ಕಮಕ್ಕಳು ಗಣ್ಯರ ವೇಷಭೂಷಣದಲ್ಲಿ ಕಂಡು ಬಂದಿದ್ದು ರೋಮಾಂಚನಗೊಳಿಸಿತು. ಬ್ರಿಟೀಷರು ನಮ್ಮ ಶಿಕ್ಷಣ ಪದ್ಧತಿ ಬದಲಾಯಿಸಿದ ಪರಿಣಾಮ ಮೂಲ ತತ್ವವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಇದೀಗ ಹೊಸ ಶಿಕ್ಷಣ ಪದ್ಧತಿ ನಮ್ಮ ನೆಲದ ಮೂಲ ಸತ್ವವನ್ನು ಪ್ರಚೂರ ಪಡಿಸುತ್ತಿದೆ. ಅದಕ್ಕೆ ಎಲ್ಲರು ಕೈ ಜೋಡಿಸಬೇಕು. ಶಿಕ್ಷಣ ಎಂದರೇ ಕೇವಲ ಅಂಕಗಳನ್ನು ಪಡೆಯುವ ಸಾಧನವಲ್ಲ. ಜ್ಞಾನ, ಸಂಸ್ಕಾರ, ಸಂಸ್ಕೃತಿ ಬಲಪಡಿಸುವ ಸಾಧನವಾಗಿದೆ ಎಂದು ತಿಳಿಸಿದರು. ರಾಷ್ಟ್ರ ಸೇವಿಕಾ ಸಮಿತಿ ವಿಜಯನಗರ ಪ್ರಾಂತ ಸೇವಾ ಪ್ರಮುಖ ಸರಸ್ವತಿ ಹೆಬ್ಬಾರ, ಶಶಿಕಲಾ ಮಜ್ಜಗಿ ಇತರರು ಇದ್ದರು.