ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಷ್ಟೇ ಸೀಮಿತವಾಗದೆ, ಅದರ ಆಚೆಗೂ ಶಿಷ್ಯರ ಬದುಕು ರೂಪಿಸಿಕೊಳ್ಳಲು ನೆರವಾಗುತ್ತಿರುವ ಕೆಲವೇ ಶಿಕ್ಷಕರಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಒಬ್ಬರು ಎಂದು ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಪರಮಶಿವಮೂರ್ತಿ ತಿಳಿಸಿದ್ದಾರೆ. ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಾಡೋಜ ಪ್ರೊ.ಬರಗೂರು ಸ್ನೇಹ ಬಳಗ, ತುಮಕೂರು ಹಮ್ಮಿಕೊಂಡಿದ್ದ ಬರಗೂರು ಮೀಮಾಂಸೆ ಮತ್ತು ಬರಗೂರರಿಗೆ ತವರು ಜಿಲ್ಲೆಯ ಗೌರವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬರಗೂರು ತನ್ನ ವಿದ್ಯಾರ್ಥಿಗಳು ಓದು ಮುಗಿಸಿದ ನಂತರವೂ, ಅವರ ಕಷ್ಟ, ಸುಖಃಗಳಿಗೆ ಸ್ಪಂದಿಸಿ, ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಹತ್ತಾರು ಸಾವಿರ ವಿದ್ಯಾರ್ಥಿಗಳ ಹೃದಯದಲ್ಲಿರುವ ಪ್ರೀತಿಯ ಮೇಷ್ಟ್ರು ಆಗಿದ್ದಾರೆ ಎಂದರು. ಹಂಪಿಯ ಕನ್ನಡ ವಿವಿಯ ಕುಲಪತಿಯಾದ ನಂತರವೂ ಕೆಲ ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಂಡಿದ್ದೇನೆ. ಅವರಿಗೆ ಹಂಪಿ ಕನ್ನಡ ವಿವಿ ನಾಡೋಜ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚುವಂತೆ ಮಾಡಿದೆ. ಅವರು ಹಂಪಿ ವಿವಿಯ ಕುಲಪತಿಗಳಾಗಬೇಕೆಂಬುದ ನಮ್ಮ ಬಯಕೆಯಾಗಿತ್ತು. ಆದರೆ ನಾಡೋಜ ಮೂಲಕ ನಮ್ಮ ಆಸೆ ಈಡೇರಿದೆ ಎಂದರು.ಗ್ರಾಮೀಣ ಭಾಗದಿಂದ ಬಂದ ನನ್ನಂತಹ ಅನೇಕ ವಿದ್ಯಾರ್ಥಿಗಳಲ್ಲಿದ್ದ ಕೀಳಿರಿಮೆಯನ್ನು ಹೋಗಲಾಡಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಬರಗೂರು ರಾಮಚಂದ್ರಪ್ಪ ಯಶಸ್ವಿಯಾಗಿದ್ದಾರೆ ಎಂದು ಡಾ.ಡಿ.ವಿ.ಪರಮಶಿವಮೂರ್ತಿ ನುಡಿದರು.ದಿಕ್ಸೂಚಿ ಭಾಷಣ ಮಾಡಿದ ಕಲ್ಬರ್ಗಿಯ ಸಹಾಯಕ ಪ್ರಾಧ್ಯಾಪಕ ಡಾ.ಅರುಣ ಜೋಳದ ಕೂಡ್ಲಗಿ, ಬರಗೂರು ಅವರ ಇದುವರೆಗಿನ ಬರಹ, ಮಾತು ಮತ್ತು ಸಿನಿಮಾಗಳನ್ನು ಗಮನಿಸಿದರೆ, ಎಲ್ಲದರಲ್ಲಿಯೂ ಪ್ರಜಾಪ್ರಭುತ್ವ ಮತ್ತು ಸಮಸಮಾಜ ಆಶಯ ಕಾಣಬಹುದು. ಕಾಗೆಯ ಕಣ್ಣಿನಲ್ಲಿಯೂ ಕಾರುಣ್ಯವನ್ನು ಕಂಡುವರು ಬರಗೂರು, ಹಾಗಾಗಿ ಬರಗೂರರ ಸಮಗ್ರ ಸಾಹಿತ್ಯವನ್ನು ಮರುವಿಮರ್ಶೆಗೆ ಒಳಪಡಿಸುವ ಕೆಲಸ ಆಗಬೇಕಾಗಿದೆ. ಯಾವುದಕ್ಕೂ ರಾಜೀ ಮಾಡಿಕೊಂಡವರಲ್ಲ. ಜಾತಿಯ ಹೋರಾಟಗಳಿಗೆ ಬೆಂಬಲ ನೀಡುತ್ತಲೇ ಜಾತ್ಯಾತೀತವಾಗಿ ಬರೆದಂತೆ, ಬದುಕುತಿದ್ದಾರೆ. ಹಾಗಾಗಿ ಬರಗೂರು ರಾಮಚಂದ್ರಪ್ಪ ನಮ್ಮ ನಡುವೆ ಇರುವ ಸಾರ್ವಜನಿಕ ಬುದ್ದಿಜೀವಿ ಎಂದು ಡಾ.ಅರುಣ್ ಜೋಳದ ಕೂಡ್ಲಗಿ ತಿಳಿಸಿದರು.
ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ,ಪ್ರೊ. ಬರಗೂರು ರಾಮಚಂದ್ರಪ್ಪ ನನಗೆ ನೇರವಾಗಿ ಮೇಷ್ಟ್ರು ಅಲ್ಲದಿದ್ದರೂ ಬದುಕಿನ ಪಾಠ ಕಲಿಸಿದ ಗುರುಗಳು, ಅವರ ಸಂಘಟನೆ, ಹೋರಾಟದ ಬದುಕು ನನ್ನಂತಹ ಅನೇಕರಿಗೆ ಸ್ಪೂರ್ತಿ. ತಮ್ಮ ಪತ್ನಿ ರಾಜೇಶ್ವರಿ ಅವರ ಬಗ್ಗೆ ಇರುವ ಗೌರವ ಭಾವನೆ, ಪುರಾಣದ ನಾಯಕರನ್ನು ಮೀರಿಸುವಂತಹದ್ದು ಎಂದರು.ಕರ್ನಾಟಕ ಲೇಖಕಿಯರ ಬಳಗದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ಪ್ರಭುತ್ವದೊಂದಿಗೆ ಗುರುತಿಸಿಕೊಂಡರೂ, ಅವರೊಂದಿಗೆ ಶಾಮೀಲಾಗದೆ ಸದಾ ಭಿನ್ನವಾಗಿಯೇ ಗುರುತಿಸಿಕೊಂಡಿರುವ ಅವರ ಅಕ್ಷರ ಅರಿವು ಇತರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹದ್ದು ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಕೆ.ದೊರೆರಾಜು ಮಾತನಾಡಿ, ನಮ್ಮೊಡನೆ ಇರುವ ನಾಡಿನ ಸಾಕ್ಷಿ ಪ್ರಜ್ಞೆ ಬರಗೂರು ರಾಮಚಂದ್ರಪ್ಪ ಅವರಿಗೆ ತವರಿನ ಗೌರವ ಮಾಡಬೇಕೆಂಬುದು ನಮ್ಮಂತಹ ಅನೇಕರ ಬಹುದಿನದ ಕನಸು ಇಂದು ಈಡೇರಿದೆ ಎಂದರು. ವೇದಿಕೆಯಲ್ಲಿ ರಂಗಮ್ಮ ಹೊದೆಕಲ್ಲು, ಗೋವಿಂದಯ್ಯ ಎಚ್ ಮತ್ತಿತರರು ಉಪಸ್ಥಿತರಿದ್ದರು.