ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಇಂಡಿಗನತ್ತ ಗ್ರಾಮದಲ್ಲಿ ಭಾನುವಾರ ಚಿರತೆಯೊಂದು ಬಾಲಕನನ್ನು ಹೊತ್ತೊಯ್ದ ಪ್ರಕರಣ ಸಂಬಂಧ ನಾಗಮಲೆಗೆ ಪಾದಯಾತ್ರೆ ಹೋಗುವುದನ್ನು ನಿಷೇಧಿಸಲಾಗಿದೆ.
ಹನೂರು (ಚಾಮರಾಜನಗರ) : ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಇಂಡಿಗನತ್ತ ಗ್ರಾಮದಲ್ಲಿ ಭಾನುವಾರ ಚಿರತೆಯೊಂದು ಬಾಲಕನನ್ನು ಹೊತ್ತೊಯ್ದ ಪ್ರಕರಣ ಸಂಬಂಧ ನಾಗಮಲೆಗೆ ಪಾದಯಾತ್ರೆ ಹೋಗುವುದನ್ನು ನಿಷೇಧಿಸಲಾಗಿದೆ.
ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ
ಹರ್ಷಿತ್‌ನನ್ನು ಹೊತ್ತೊಯ್ದು ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸುಡು ಬಿಸಿಲಿನಲ್ಲಿಯೇ ಧಿಕ್ಕಾರ ಘೋಷಣೆಗಳನ್ನು ಕೂಗುತ್ತ ಪ್ರತಿಭಟಿಸಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಬೆಟ್ಟಕ್ಕೆ ಬರುವ ಭಕ್ತರಿಗೆ ರಕ್ಷಣೆ ಇಲ್ಲದಂತಾಗಿದೆ.
ಕ್ರೂರ ಪ್ರಾಣಿಗಳ ಹಾವಳಿಗೆ 5 ತಿಂಗಳಲ್ಲಿ 2 ಜೀವಗಳು ಬಲಿಯಾಗಿ, ಓರ್ವ ತೀವ್ರವಾಗಿ ಗಾಯಗೊಂಡಿದ್ದಾರೆ. ನಾಗಮಲೆಗೆ ತೆರಳುವಾಗ ಅರಣ್ಯ ಇಲಾಖೆ 200 ರು. ಶುಲ್ಕ ಜೊತೆಗೆ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿದೆ. ಆದರೆ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಚಾರಣಕ್ಕೆ ತಾತ್ಕಾಲಿಕ ನಿರ್ಭಂಧ:
ಕಾವೇರಿ ವನ್ಯಧಾಮದ ಡಿಸಿಎಫ್ ಸುರೇಂದ್ರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಈಗ ತಾತ್ಕಾಲಿಕವಾಗಿ ಚಾರಣ ನಿಷೇಧಿಸಲಾಗಿದೆ. ನಾಗಮಲೆಗೆ ತೆರಳುವ ಮಾರ್ಗದಲ್ಲಿ ರಸ್ತೆ ನಿರ್ಮಿಸಿ, ಗೈಡ್‌ಗಳನ್ನು ನೇಮಿಸಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಅದೇ ರೀತಿ ಇಂಡಿಗನತ್ತ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಅರಣ್ಯ ಅಧಿಕಾರಿಗಳ ದುರ್ವರ್ತನೆ, ದೂರುಗಳಿದ್ದರೆ ತಿಳಿಸಿ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


