ಇಲ್ಲಿನ ಬಂಕಿಕೊಡ್ಲದ ಕಾಶಿ ವಿಶ್ವನಾಥ ದೇವಾಲಯದ ರಥೋತ್ಸವ ಚಂಪಾಷಷ್ಟಿ ದಿನವಾದ ವಿಜೃಂಭಣೆಯಿಂದ ಜರುಗಿತು.

ಗೋಕರ್ಣ:

ಇಲ್ಲಿನ ಬಂಕಿಕೊಡ್ಲದ ಕಾಶಿ ವಿಶ್ವನಾಥ ದೇವಾಲಯದ ರಥೋತ್ಸವ ಚಂಪಾಷಷ್ಟಿ ದಿನವಾದ ವಿಜೃಂಭಣೆಯಿಂದ ಜರುಗಿತು.ಮುಂಜಾನೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದ ಬಳಿಕ ಮಧ್ಯಾಹ್ನ ರಥೋತ್ಸವ ಕಾಶಿ ವಿಶ್ಬನಾಥ ದೇವಾಲಯದಿಂದ ಗ್ರಾಮ ದೇವರಾದ ಬಂಕನಾಥೇಶ್ವರ ದೇವಾಲಯದವರಗೆ ರಥ ಸಾಗಿ ಪುನಃ ದೇವಾಲಯಕ್ಕೆ ಮರಳಿತು. ನಂತರ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಹನೇಹಳ್ಳಿ ಮಾದನಚಿಟ್ಟಿಗೆ ಸಾಗಿ ಮೃಗಬೇಟೆ ನೆರವೇರಿಸಿ ಬಳಿಕ ಕಳಸದಕೇರಿಯ ಕಳಸದ ಮನೆಯಲ್ಲಿ ಪೂಜೆ ಸ್ವೀಕರಿಸಿ ಮಂದಿರಕ್ಕೆ ಮರಳಿತು. ಚಂಪಾಷಷ್ಟಿ ಪ್ರಯುಕ್ತ ಸಾರಸ್ವತ್ ಸಮಾಜದ ಹಿರಿಯ ಊರಿನ ಎಲ್ಲರಿಗೂ ಒಳಿತಾಗಲೆಂದು ಅನಾದಿಕಾಲದಿಂದ ರಥೋತ್ಸವ ನಡೆಸುತ್ತಾ ಬಂದಿದ್ದು, ಅಂದಿನಿಂದ ಇಂದಿನವರೆಗೂ ಮುಂದುವರಿದಿದೆ. ಇದು ಈ ಭಾಗದ ಈ ವರ್ಷದ ಪ್ರಥಮ ರಥೋತ್ಸವವಾಗಿದ್ದು, ಇದಾದ ನಂತರ ವಿವಿದೆಡೆಯ ದೇವಾಲಯದ ವಾರ್ಷಿಕ ರಥೋತ್ಸವಗಳು ನಡೆಯುತ್ತದೆ.ಕಂಚಿ ಹಣ್ಣಿನ ವ್ಯಾಪಾರ ಜೋರು:

ಈ ಸಮಯದಲ್ಲಿ ಸ್ಥಳೀಯವಾಗಿ ಬೆಳೆಯುವ ಸಿಹಿಕಂಚಿ ಹಣ್ಣು ಕೊಯ್ಲಿಗೆ ಬರುತ್ತದೆ. ಅದನ್ನ ಈ ಜಾತ್ರೆಯಲ್ಲಿ ತಂದು ಮಾರಾಟ ಮಾಡುವುದು ವಾಡಿಕೆಯಾಗಿದ್ದು, ಅದರಂತೆ ಈ ವರ್ಷವು ಹಣ್ಣು ಮಾರಟಕ್ಕೆ ಬಂದಿದ್ದು, ದರ ದುಬಾರಿಯಾದರು ಸಹ ಜನರು ಖರೀದಿಸುತ್ತಿರುವುದು ಕಂಡುಬಂತು. ಇನ್ನೂ ಮಿಠಾಯಿ, ಸಿಹಿತಿನಿಸು, ಆಟಿಕೆ ಮತ್ತಿತರ ವಸ್ತುಗಳ ಜಾತ್ರಾ ಅಂಗಡಿಗಳು ಬಂದಿದ್ದು, ವ್ಯಾಪಾರ ಜೋರಾಗಿ ನಡೆದಿತ್ತು. ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ ಬಂದೂಬಸ್ತ ಕಲ್ಪಿಸಿದ್ದರು.ಈ ಹಿಂದೆ ಗೆರಶಿ, ಮಣ್ಣಿನ ಮಡಿಕೆ ಮತ್ತಿತರ ಗ್ರಾಮೀಣ ಪ್ರದೇಶದಲ್ಲಿ ತಯಾರಾದ ಗೃಹೋಪಯೋಗಿ ವಸ್ತುಗಳು ಅಧಿಕ ಸಂಖ್ಯೆಯಲ್ಲಿ ಮಾರಟಕ್ಕೆ ಬರುತ್ತಿದ್ದು ಜನರು ಉತ್ಸಾಹದಿಂದ ಪಡೆಯುತ್ತಿದ್ದರು ಎಂದು ಇಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಿದ್ದು, ಈಗಲೂ ಅಲ್ಪ ಪ್ರಮಾಣದಲ್ಲಿ ಇಂದು ಅಪರೂಪವಾದ ಇಂತಹ ವಸ್ತುಗಳು ಬಂದಿತ್ತು.