ಚೌತನಿಯ ಶರಾಬಿ ಹೊಳೆಯ ಸ್ವಚ್ಛತಾ ಕಾರ್ಯವನ್ನು 2026ರ ಜನವರಿಯಲ್ಲಿ ಆರಂಭಿಸಲಾಗುತ್ತಿದ್ದು, ಮಾರ್ಚ್ ವೇಳೆಗೆ ಕೆಲಸ ಪೂರ್ಣಗೊಳಿಸಲಾಗುವುದು.

ಸ್ಥಳಕ್ಕಾಗಮಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ ನೀರಾವರಿ ಇಲಾಖೆ ಅಭಿಯಂತರ ಆನಂದಕುಮಾರ

ಕನ್ನಡಪ್ರಭ ವಾರ್ತೆ ಭಟ್ಕಳ

ಚೌತನಿಯ ಶರಾಬಿ ಹೊಳೆಯ ಸ್ವಚ್ಛತಾ ಕಾರ್ಯವನ್ನು 2026ರ ಜನವರಿಯಲ್ಲಿ ಆರಂಭಿಸಲಾಗುತ್ತಿದ್ದು, ಮಾರ್ಚ್ ವೇಳೆಗೆ ಕೆಲಸ ಪೂರ್ಣಗೊಳಿಸಲಾಗುವುದು ಎಂದು ನೀರಾವರಿ ಇಲಾಖೆಯ ಹಿರಿಯ ಎಂಜಿನಿಯರ್ ಆನಂದಕುಮಾರ ತಿಳಿಸಿದ್ದಾರೆ.

ಶರಾನಿ ಹೊಳೆ ವೀಕ್ಷಿಸಿದ ಬಳಿಕ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಪುರಸಭೆ ಮಾಜಿ ಸದಸ್ಯ ಕೈಸರ್ ಮೊಹ್ತಿಷಂ, ಫಯ್ಯಾಝ್ ಮುಲ್ಲಾ, ಅಲ್ತಾಫ್ ಕರೂರಿ ಸೇರಿದಂತೆ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಳೆ ಶುದ್ಧೀಕರಣ ಯೋಜನೆ ಕುರಿತು ಚರ್ಚಿಸಿದರು. ರಾಜ್ಯ ಸರ್ಕಾರ ಹೊಳೆ ಆಳಗೊಳಿಸುವುದು, ಹೂಳನ್ನು ಎತ್ತುವುದು ಮತ್ತು ಸಮಗ್ರ ಸ್ವಚ್ಛತಾ ಕಾರ್ಯಕ್ಕಾಗಿ ₹10 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.

ಚೌತನಿ ಬಳಿ ಇರುವ ಕುದರೆ ಬೀರಪ್ಪ ದೇವಸ್ಥಾನದಿಂದ ಡೊಂಗರ್ ಪಳ್ಳಿವರೆಗೆ ಸುಮಾರು 1.9 ಕಿಮೀ ವ್ಯಾಪ್ತಿಯಲ್ಲಿ ಹೊಳೆ ಶುದ್ಧೀಕರಣ ನಡೆಯಲಿದೆ. ಹೊಳೆಯಲ್ಲಿನ ಮಣ್ಣು, ಕಸ, ಗಿಡಗಂಟೆಗಳ ಗುಡ್ಡೆಯನ್ನು ತೆಗೆಯುವ ಜೊತೆಗೆ ಹೊಳೆ ಆಳವನ್ನು ಸುಮಾರು 3 ಮೀಟರ್‌ವರೆಗೆ ಹೆಚ್ಚಿಸಲಾಗುತ್ತದೆ ಎಂದರು.

ಮಜ್ಲಿಸ್ ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಕೀಬ್ ಎಂ.ಜೆ. ನದ್ವಿ, ಅಡ್ವೊಕೇಟ್ ಸೈಯ್ಯದ್ ಇಮ್ರಾನ್ ಲಂಕಾ, ಮೌಲವಿ ತೈಮೂರು ಗವಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದರು. ಅಭಿಯಂತರ ಆನಂದ್ ಕುಮಾರ್ ಅವರೊಂದಿಗೆ ಬೆಂಗಳೂರಿನಿಂದ ಹಾಗೂ ಕಾರವಾರದಿಂದ ಬಂದ ಹಿರಿಯ–ಕಿರಿಯ ಎಂಜಿನಿಯರ್‌ ಉಪಸ್ಥಿತರಿದ್ದರು.

ಗೌಸಿಯಾ ಸ್ಟ್ರೀಟ್ ಪ್ರದೇಶದಲ್ಲಿ ಒಳಚರಂಡಿ ಪಂಪಿಂಗ್ ಸ್ಟೇಷನ್‌ ನಿರ್ಮಾಣವಾದ ನಂತರ ಹೊಳೆಗೆ ಮಲೀನ ನೀರು ಸೇರುತ್ತಿತ್ತು. ಒಳಚರಂಡಿ ನೀರು ಸೇರ್ಪಡೆಯಿಂದಾಗಿ ಶರಾಬಿ ಹೊಳೆ ನೀರು ಕಲುಷಿತಗೊಂಡಿದ್ದು, ದುರ್ವಾಸನೆ ಬೀರುತ್ತಿದೆ. ಹೊಳೆಯ ಹದಗೆಟ್ಟ ಸ್ಥಿತಿಯಿಂದ, ಕೋಸ್ಮೋಸ್, ಸನ್‌ಶೈನ್, ಮೂನ್‌ಸ್ಟಾರ್, ಲೈನ್, ರೋಯಲ್ ಮತ್ತು ಸುಲ್ತಾನಿ ವೆಲ್ಫೇರ್ ಅಸೋಸಿಯೇಷನ್ ಸೇರಿ ಹಲವು ಕ್ರೀಡಾ ಸಂಘಗಳ ಪ್ರತಿನಿಧಿಗಳು ಶರಾಬಿ ನದಿ ಹೋರಾಟ ಸಮಿತಿ ರಚಿಸಿದ್ದರು. ಮಜ್ಲಿಸ್ ಇಸ್ಲಾಹ್ ವ ನಜೀಮ್‌ನ ಸಹಭಾಗಿತ್ವದಲ್ಲಿ ಸಮಿತಿ ಬಲವಾದ ಹೋರಾಟ ನಡೆಸಿ ಕೆಲವು ತಿಂಗಳುಗಳ ಹಿಂದೆ ಪ್ರತಿಭಟನೆ ಕೂಡ ಆಯೋಜಿಸಿತ್ತು. ನಂತರ ಸಮಿತಿಯ ಸದಸ್ಯರು ಶಾಸಕ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ಹೊಳೆಯ ಹೂಳೆತ್ತುವುದು ಮತ್ತು ಶುದ್ಧೀಕರಣಕ್ಕೆ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಸರಕಾರದಿಂದ ಶರಾಬಿ ಹೊಳೆ ಶುದ್ಧೀಕರಣಕ್ಕೆ ₹10 ಕೋಟಿ ಮಂಜೂರಿಸಿಕೊಂಡು ಬಂದಿದ್ದು, ಜನವರಿಯಿಂದ ಕೆಲಸ ಆರಂಭವಾಗಲಿದೆ.