ಶಿಗ್ಗಾಂವಿ ಪಟ್ಟಣದ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕನಕದಾಸರು ಮತ್ತು ಶಿಶುನಾಳ ಶರೀಫರು: ತೌಲನಿಕ ಅನುಸಂಧಾನ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಶಿಗ್ಗಾಂವಿ: ಬದುಕು ಮೌಲ್ಯಾಧಾರಿತವಾಗಿ ಸಾಗಲು ಮನುಷ್ಯನು ಜಾತಿ ಮತಗಳ ಆಧಾರದ ಮೇಲೆ ಬದುಕುವುದನ್ನು ಬಿಟ್ಟು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಸಂತ ಕವಿ ಕನಕದಾಸರು ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಭಾರತಿ ಹೆಗಡೆ ಹೇಳಿದರು.

ಪಟ್ಟಣದ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ ಕನಕದಾಸರು ಮತ್ತು ಶಿಶುನಾಳ ಶರೀಫರು: ತೌಲನಿಕ ಅನುಸಂಧಾನ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಮನುಷ್ಯ ಮನುಷ್ಯನಾಗಿ ಬದುಕಿದರೆ ಮಾತ್ರ ಜೀವನ ಸಾರ್ಥಕ. ಜಾತಿ, ಮತಗಳಿಂದ ಮನುಷ್ಯನ ಬೆಳವಣಿಗೆ ಕುಗ್ಗುವಂತಾಗಿದೆ ಎಂದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಜೆ.ಎಂ. ನಾಗಯ್ಯ ಮಾತನಾಡಿ, ಮನಸ್ಥಿತಿ ಕುಗ್ಗಿದಾಗ ಕೋಮು ಸಂಘರ್ಷಕ್ಕೆ ಕಾರಣವಾಗುತ್ತವೆ. ಅಂಥವರಿಗೆ ತಮ್ಮ ಧರ್ಮಗಳೇ ಶ್ರೇಷ್ಠ, ಆದರೂ ಈ ನೆಲದ ಸಂಸ್ಕೃತಿ, ಧರ್ಮ ಸಮಾನತೆ, ಧರ್ಮ ಸಮನ್ವಯ ಸಾಧಿಸಿದ್ದು ವಿಶೇಷ ಎಂದರು.

ಕಾಸರಗೋಡು ಪ್ರಮಿಳಾ ಮಾಧವ ಕನಕ– ಶರೀಫರ ಕೃತಿಗಳ ತಾತ್ವಿಕ ನೆಲೆ ಕುರಿತು ಉಪನ್ಯಾಸ ಮಂಡಿಸಿ, ಕನಕದಾಸರು, ಶರೀಫರ ತತ್ವ ಪದಗಳು ಮನುಕುಲವನ್ನು ಜಾಗ್ರತಗೊಳಿಸಿವೆ. ಮನುಷ್ಯನ ಮೌಲ್ಯಾಧಾರಿತ ಬದುಕು ಕಟ್ಟಿಕೊಳ್ಳಲು ತತ್ವಪದ ಸಹಕಾರಿಯಾಗಿವೆ ಎಂದರು.

ಬೆಂಗಳೂರಿನ ಜೆ. ಶ್ರೀನಿವಾಸ ಮೂರ್ತಿ ''''ಕನಕ– ಶರೀಫರು, ಮತ ಒಳ– ಹೊರಗೆ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಾಚೀನ ಕಾಲದಿಂದ ಜಾತಿ, ಮತಗಳು ಕುಲಕಸುಬುಗಳಿಂದ ಬಂದಿದ್ದು, ಈಗ ಅವು ಮರೆಯಾಗುತ್ತಿವೆ. ಆದರೆ ಸರ್ಕಾರ ಜಾತಿ ಸಮೀಕ್ಷೆ ಮಾಡುತ್ತಿದ್ದು, ಅದು ಮತ ಬ್ಯಾಂಕ್ ರಾಜಕಾರಣವಾಗಿದೆ. ಕುಲಕಸಬುಗಳಿಂದ ಜಾತಿ ನಮೂದಿಸುವುದು ಅವರಿಗೆ ಅವಮಾನ ಮಾಡಿದಂತೆ, ಇದು ಆಗಬಾರದು ಎಂದರು.

ಬಾಗಲಕೋಟೆ ಗುರುಸ್ವಾಮಿ ಹಿರೇಮಠ ಅವರು ಕನಕ– ಶರೀಫರ ಚಿಂತನೆಗಳ ಪ್ರಸ್ತುತತೆ ಮತ್ತು ಹಾವೇರಿ ಬೋವಿ ಹೊನ್ನಪ್ಪ ಅವರು ಕನಕ– ಶರೀಫರು: ಗುರುತತ್ವ ಮತ್ತು ಜನಪದ ಸಾಹಿತ್ಯ ಕುರಿತು ಉಪನ್ಯಾಸ ಮಂಡಿಸಿದರು.

ಪ್ರಾಧ್ಯಾಪಕ ಡಿ.ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಆನಂದ ಇಂದೂರ ಮಾತನಾಡಿದರು. ಪ್ರಾಧ್ಯಾಪಕರಾದ ಡಿ.ಎಸ್. ಸೊಗಲದ, ಇಮ್ತಿಯಾಜ್ ಖಾನ್, ಅಂಬಿಳಿ ಪಿಳ್ಳೈ, ಪ್ರವೀಣ ಜೈನ್, ಸುರೇಶ ವಾಲ್ಮೀಕಿ, ಶ್ರದ್ಧಾ ಬೆಳದಡಿ, ಮಂಜಪ್ಪ ಚಲವಾದಿ, ಸತೀಶ ಸಿಂಗ್ ಎಸ್., ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.