ಸಾರಾಂಶ
ವಿರುಚಿ, ಮಲ್ಲಿಗೆ, ಶಂಬಗ, ಸೇವಂತಿಗೆ, ಕನಕಾಂಬರ, ಪಾರಿಜಾತ, ಕಾಕಡ, ಗುಲಾಬಿ, ತುಳಸಿ, ಮುಂತಾದ ವಿಶೇಷ ಪುಷ್ಪಗಳಿಂದ ವಿಶೇಷ ಹಾರಗಳನ್ನು ಸಮರ್ಪಿಸಿ ಶ್ರೀಚೆಲುವನಾರಾಯಣನ ಉತ್ಸವವನ್ನು ವೈಭವದಿಂದ ನಡೆಸಲಾಗುತ್ತದೆ. ಮೇಲುಕೋಟೆಯ ಪಾರಂಪರಿಕ ವಿಶೇಷ ನೈವೇದ್ಯಗಳನ್ನು ಕೈಂಕರ್ಯ ಪರರು ಸ್ವಾಮಿಗೆ ಅರ್ಪಿಸುತ್ತಾರೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀ ಚೆಲುವ ನಾರಾಯಣಸ್ವಾಮಿಯವರ ಕೊಠಾರೋತ್ಸವ ಜ.4ರಿಂದ 13ರವರೆಗೆ ವೈಭವದಿಂದ ನಡೆಯಲಿದೆ.ಕ್ಯಾಲೆಂಡರ್ ವರ್ಷದ ಮೊದಲ ಉತ್ಸವ ಹತ್ತು ದಿನಗಳ ಕಾಲ ನಡೆಯಲಿದ್ದು, ದೇವಾಲಯದ ಸ್ಥಳಾಚಾರ್ಯ ಪುರುಷರು, ಕೈಂಕರ್ಯ ಪರರು ಅನೂಚಾನ ಸಂಪ್ರದಾಯದಂತೆ ಪುಷ್ಪ ಕೈಂಕರ್ಯ ಸೇವೆಯೊಂದಿಗೆ ಉತ್ಸವ ನಡೆಸಿಕೊಡಲಿದ್ದಾರೆ.
ಹನ್ನೆರಡು ಆಳ್ವಾರುಗಳಿಗೆ ಕೊಠಾರಮಂಟಪದಲ್ಲಿ ಗೌರವಾರ್ಪಣೆ, ಮಾಲೆ ಮರ್ಯಾದೆಗಳು ನಡೆಯಲಿವೆ. ಇದಕ್ಕೂ ಮುನ್ನ ಪ್ರತಿದಿನ ಸಂಜೆ 5 ಗಂಟೆ ವೇಳೆಗೆ ರಾಜಬೀದಿಯಲ್ಲಿ ವೈವಿಧ್ಯಮಯ ಪುಷ್ಪಕೈಂಕರ್ಯ ಸೇವೆಗಳು ನೆರವೇರಲಿವೆ.ವಿರುಚಿ, ಮಲ್ಲಿಗೆ, ಶಂಬಗ, ಸೇವಂತಿಗೆ, ಕನಕಾಂಬರ, ಪಾರಿಜಾತ, ಕಾಕಡ, ಗುಲಾಬಿ, ತುಳಸಿ, ಮುಂತಾದ ವಿಶೇಷ ಪುಷ್ಪಗಳಿಂದ ವಿಶೇಷ ಹಾರಗಳನ್ನು ಸಮರ್ಪಿಸಿ ಶ್ರೀಚೆಲುವನಾರಾಯಣನ ಉತ್ಸವವನ್ನು ವೈಭವದಿಂದ ನಡೆಸಲಾಗುತ್ತದೆ. ಮೇಲುಕೋಟೆಯ ಪಾರಂಪರಿಕ ವಿಶೇಷ ನೈವೇದ್ಯಗಳನ್ನು ಕೈಂಕರ್ಯ ಪರರು ಸ್ವಾಮಿಗೆ ಅರ್ಪಿಸುತ್ತಾರೆ.
ವಿಶೇಷ ಮಂಗಳವಾದ್ಯ ದಿವ್ಯ ಪ್ರಬಂಧ ಪಾರಾಯಣಗಳು, ಸಂಗೀತ ರಾಮಾಯಣ, ಅರೆಯರ್ ಪಠಣಗಳು ಕೊಠಾರೋತ್ಸವಕ್ಕೆ ವಿಶೇಷ ಮೆರಗು ತಂದುಕೊಡುತ್ತವೆ. ಜನವರಿ 4ರಂದು ಕೊಠಾರೋತ್ಸವ ಆರಂಭವಾಗುವುದರೊಂದಿಗೆ ಮೇಲುಕೋಟೆಯಲ್ಲಿ ಬೆಳಗಿನ ಧನುರ್ಮಾಸ ಪೂಜೆ ಮುಕ್ತಾಯವಾಗಿ ಮಧ್ಯಾಹ್ನದ ಧನುರ್ಮಾಸ ಪೂಜೆಗಳು ನಡೆಯಲಿವೆ.ಹತ್ತು ದಿನಗಳ ಕಾಲ 12 ಆಳ್ವಾರುಗಳು ಚೆಲುವನಾರಾಯಣನ ಸನ್ನಿಧಿಯ ಮುಂದಿರುವ ನವರಂಗ ಮಂಟಪದಲ್ಲಿ ದರ್ಶನ ನೀಡುವುದು ವಿಶೇಷವಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊಠಾರೋತ್ಸವದ ವೇಳೆ ಸ್ವಾಮಿಯ ದರ್ಶನ ಪಡೆಯಬೇಕು ಎಂದು ದೇವಾಲಯದ ಕೈಂಕರ್ಯ ಪರರು ಕೋರಿದ್ದಾರೆ.