ಸಾರಾಂಶ
ರೈತರು ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ ಅತಿ ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ರೀತಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು ಇಳುವರಿ ಹೆಚ್ಚು ಮಾಡುವ ಉದ್ದೇಶದಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಎಂದು ಹೇಳುತ್ತಿರುವುದರಿಂದ ಎಲ್ಲರೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಆದರೆ ಇದು ಸರಿಯಲ್ಲ. ಉತ್ತಮ ಹಾಗೂ ನೈಸರ್ಗಿಕ ಆಹಾರ ಸಹ ಪ್ರತಿಯೊಬ್ಬರ ಹಕ್ಕಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ರೈತರು ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಿ ಅತಿ ಹೆಚ್ಚು ಇಳುವರಿ ಪಡೆಯುವ ವೈಜ್ಞಾನಿಕ ರೀತಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು ಇಳುವರಿ ಹೆಚ್ಚು ಮಾಡುವ ಉದ್ದೇಶದಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಎಂದು ಹೇಳುತ್ತಿರುವುದರಿಂದ ಎಲ್ಲರೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಆದರೆ ಇದು ಸರಿಯಲ್ಲ. ಉತ್ತಮ ಹಾಗೂ ನೈಸರ್ಗಿಕ ಆಹಾರ ಸಹ ಪ್ರತಿಯೊಬ್ಬರ ಹಕ್ಕಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ಅವರು ಬುಧವಾರ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದೇಶನ ವೇದಿಕೆಯಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಣ್ಣಿನ ಮಹತ್ವ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಸಮಗ್ರ ಕೃಷಿ ಪದ್ಧತಿಗಳ ಕುರಿತ ವಿಚಾರ ಸಂಕಿರಣ ಹಾಗೂ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ನಂಜಾವಧೂತ ಸ್ವಾಮೀಜಿಗಳು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಿ ಅನ್ನದಾತರಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮಠಗಳು ರಾಜಕೀಯ ಕೇಂದ್ರ ಆಗಬಾರದು ಅನ್ನ ದಾಸೋಹ, ವಿದ್ಯೆ, ಧರ್ಮ ಬೆಳೆಸುವ ಹಾಗೂ ದೇಶಕ್ಕೆ ಅನ್ನ ನೀಡುವ ರೈತನ ಬೆನ್ನೆಲುಬಾಗಿರಬೇಕು ಅಂತಹ ಮಹತ್ಕಾರ್ಯವನ್ನು ಶ್ರೀ ನಂಜಾವಧೂತ ಸ್ವಾಮೀಜಿಗಳು ಮಾಡುತ್ತಿದ್ದಾರೆ ಎಂದರು.ಶ್ರೀ ಗುರುಗುಂಡ ಬ್ರಹ್ಮೇಶ್ವರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮಿಗಳು ಮಾತನಾಡಿ ರೈತರು ಕೃಷಿಯಲ್ಲಿ ಉತ್ಸಾಹ ಹಾಗೂ ನಂಬಿಕೆಯನ್ನು ಕಳೆದುಕೊಳ್ಳುವ ರೀತಿ ನೋಡಿದಾಗ ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಆಹಾರಕ್ಕಾಗಿ ಸ್ವಾವಲಂಬಿಗಳಾಗಿ ಬದುಕುತ್ತಿರುವ ನಾವುಗಳು ಬೇರೊಬ್ಬರ ಹತ್ತಿರ ಭಿಕ್ಷೆ ಬೇಡುವ ಪರಿಸ್ತಿತಿ ಉಂಟಾಗುತ್ತದೆ. ಕೃಷಿ ಒಂದು ಉದ್ಯಮವಾಗಿ ಬೆಳೆಯಬೇಕು. ಅದರಲ್ಲೂ ಲಾಭ ಸಿಕ್ಕರೆ ಮಾತ್ರ ರೈತರಲ್ಲಿ ಉತ್ಸಾಹ ನಂಬಿಕೆ ಮೂಡಿಸಬಹುದು. ವಿದೇಶದಿಂದ ರೇಷ್ಮೆ ಆಮದು ನಿಲ್ಲಿಸಿ ನಮ್ಮ ದೇಶದಲ್ಲಿ ಬೆಳೆಯುವ ರೇಷ್ಮೆಗೆ ಪ್ರೋತ್ಸಾಹ ನೀಡಬೇಕೆಂಬ ಕೇಂದ್ರ ಸರಕಾರದ ಮಂತ್ರಿಯ ತೀರ್ಮಾನದಿಂದ 60 ರಿಂದ 70 ರು.ಗಳಿದ್ದ ರೇಷ್ಮೆ ಬೆಲೆ ಈಗ 700 ರೂಗಳಿಂದ 800ರೂಗಳಿಗೆ ಏರಿಕೆಯಾಗಿದೆ. ಈ ರೀತಿ ಕೃಷಿಯೂ ಸಹ ಉದ್ದಿಮವಾಗಿ ಬೆಳೆಯಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ ನಮ್ಮ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಆರ್ ಅಶೋಕ್ ಕಂದಾಯ ಸಚಿವರಾಗಿದ್ದಾಗ ಜಾರಿಗೆ ತಂದಿದ್ದರು. ಜಿಲ್ಲಾಧಿಕಾರಿಗಳು ಸೇರಿದಂತೆ ಇಡೀ ಜಿಲ್ಲೆಯ ಉನ್ನತ ಅಧಿಕಾರಿಗಳು ಹಳ್ಳಿಗೆ ಧಾವಿಸಿ ರೈತರ ಸಮಸ್ಯೆಯನ್ನು ಬಗೆಹರಿಸಿದರು ಎಂದರು. ಕುಣಿಗಲ್ ಶಾಸಕ ಡಾ. ರಂಗನಾಥ್ ಮಾತನಾಡಿ ರೈತರು ಹಾಗೂ ಬಡವರ ಏಳಿಗೆಗಾಗಿ ಯೋಜನೆಗಳನ್ನು ಜಾರಿ ತಂದಿದ್ದು, ಯಾವ ಕಾರಣಕ್ಕೂ ಎಷ್ಟೇ ವಿರೋಧ ಕೇಳಿ ಬಂದರೂ ಈ ಗ್ಯಾರೆಂಟಿ ಯೋಜನೆಗಳನ್ನು ನಾವು ನಿಲ್ಲಿಸುವುದಿಲ್ಲ. ನಂಜಾವಧೂತ ಸ್ವಾಮಿಗಳು ರೈತರ ಪರವಾಗಿದ್ದು, ಅವರ ಜನ್ಮ ದಿನಾಚರಣೆಯನ್ನು ನೀರಿನ ಹಕ್ಕೋತ್ತಾಯದ ಮೂಲಕ ಆಚರಿಸುತ್ತಿದ್ದಾರೆ. ಶಿರಾ ನಗರಕ್ಕೆ ಹೇಮಾವತಿ ನೀರು ಬರಲು ಮುಖ್ಯ ಪ್ರೇರಣೆ ಇವರಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿ.ಕೆ.ವಿ.ಕೆ ಉಪಕುಲಪತಿ ಡಾ.ಸುರೇಶ್, ಕೃಷಿವಿಜ್ಞಾನಿಗಳಾದ ಡಾ.ಎಂ.ಎ.ಶಂಕರ್, ಡಾ.ಎಂ.ಟಿ.ಸಂಜಯ್, ನೇಗಿಲ ಯೋಗಿ ಸೇವಾ ಟೆಸ್ಟ್ ಅಧ್ಯಕ್ಷ ಮುನಿರತ್ನಪ್ಪ, ಕಾಂಗ್ರೆಸ್ ಮುಖಂಡ ಪಾರ್ಥ, ಸಹಾಯಕ ಕೃಷಿ ನಿರ್ದೇಶಕ ಡಾ.ನಾಗರಾಜ್, ಕೃಷಿ ಅಧಿಕಾರಿ ಸತ್ಯನಾರಾಯಣ, ಕೃಷಿ ತಾಂತ್ರಿಕ ಅಧಿಕಾರಿ ಕೆ.ನಟರಾಜ್, ಕೃಷಿ ಅಧಿಕಾರಿ, ಮನೋಹರ್, ರುಕ್ಮಿಣಿ, ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕಣ್ಣ, ಶಿವಕುಮಾರ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.