ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯ

| Published : Jan 23 2025, 12:50 AM IST

ಸಾರಾಂಶ

ಸ್ಕೌಟ್ಸ್ ಮತ್ತು ಗೈಡ್ಸ್‌ ಸಮಾಜಮುಖಿ ಕೆಲಸಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿ

ಲಕ್ಷ್ಮೇಶ್ವರ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆಯ ಜತೆಗೆ ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಎಸ್‌ಎಸ್‌ಬಿಆರ್ ಅಂಬೇಡ್ಕರ್ ಶಾಲೆಯಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಘಟಕ ಹಾಗೂ ಎಸ್‌ಎಸ್‌ಬಿಆರ್ ಅಂಬೇಡ್ಕರ್ ಶಾಲೆಯ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ತಾಲೂಕು ಮಟ್ಟದ ಘಟಕಗಳ ನಾಯಕರ ತರಬೇತಿ ಹಾಗೂ ದ್ವಿತೀಯ ಸೋಪಾನ ಪರೀಕ್ಷೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಧೈರ್ಯ ಹಾಗೂ ಸೇವಾ ಮನೋಭಾವನೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ ಸಮಾಜಮುಖಿ ಕೆಲಸಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದ ಅವರು, ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿದ್ದು, ಇದು ವಿದ್ಯಾರ್ಥಿ ಜೀವನದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಮಾನಸಿಕವಾಗಿ, ಆರೋಗ್ಯದ ಮೇಲೆಯೂ ಇದು ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ಮನೆಯಲ್ಲಿನ ಎಲ್ಲ ಪಾಲಕರು ಅರಿತುಕೊಳ್ಳಬೇಕು. ಅನಾವಶ್ಯಕವಾಗಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ದುಶ್ಚಟ ನಿಯಂತ್ರಗೊಳಿಸಿ ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ನಾಯಕ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ ಸಮಾಜಮುಖಿ ಕೆಲಸಗಳು ಮತ್ತು ಪ್ರತಿಯೊಬ್ಬರಲ್ಲಿ ದೇಶ ಪ್ರೇಮ ಸಾರುವ ಯೋಜನೆ ಹೊಂದಿದ್ದು, ಶಿಸ್ತು, ಮುಖಂಡತ್ವ ಗುಣ, ದೇಶಭಕ್ತಿ, ಆತ್ಮಸ್ಥೈರ್ಯ, ಧೈರ್ಯ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಲು ಅಂತಾರಾಷ್ಟ್ರೀಯ ಸಂಸ್ಥೆ ಸ್ಕೌಟ್, ಗೈಡ್ಸ್‌ನಿಂದ ಸಾಧ್ಯವಾಗುತ್ತದೆ. ಶಿಕ್ಷಕರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅನುಕೂಲ ಪಡೆಯುವ ಜತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು.

ಸ್ಕೌಟ್ಸ್, ಗೈಡ್ಸ್ ತಾಲೂಕು ಕಾರ್ಯದರ್ಶಿ ಕೆ.ಆರ್.ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಕೆ. ರವಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ, ಸದಸ್ಯ ರಾಮು ಗಡದವರ, ಸ್ಕೌಟ್ಸ್, ಗೈಡ್ಸ್ ತಾಲೂಕು ನಿರ್ದೇಶಕ ಡಿ.ಎಂ.ಪೂಜಾರ, ಈರಣ್ಣ ಅಕ್ಕೂರ, ಎಂ.ಎ.ಬುಕ್ಕಿಟ್ಟಗಾರ, ಜಿ.ಎ. ಹುಲಸೂರ, ಸಿಆರ್‌ಪಿ ಸತೀಶ ಬೋಮಲೆ, ಬಿ.ಎಸ್. ಬಂಕಾಪುರ, ಡಿ.ಡಿ. ಲಮಾಣಿ ಹಾಗೂ ಶಿಕ್ಷಕರು, ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಿ.ಡಿ. ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗೌರವಿಸಲಾಯಿತು.