ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ

| Published : Jan 23 2025, 12:50 AM IST

ಸಾರಾಂಶ

ಈಗಾಗಲೇ ಕ್ಷೇತ್ರದ ಎಲ್ಲ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಜನ ಸಂಪರ್ಕಸಭೆ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಬಹುತೇಕ ಬಂದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಈಗಾಗಲೇ ಕ್ಷೇತ್ರದ ಎಲ್ಲ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಜನ ಸಂಪರ್ಕಸಭೆ ನಡೆಸುವ ನಿಟ್ಟಿನಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿ ಬಹುತೇಕ ಬಂದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ತಿಳಿಸಿದರು.

ಬುಧವಾರ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರಿಂದ ಅರ್ಜಿಗಳು ಕಂದಾಯ ಇಲಾಖೆಗೆ ಬರಲಿ ಅಥವಾ ತಾಲೂಕು ಪಂಚಾಯಿತಿಗೆ ಬರಲಿ ಅರ್ಜಿಗಳ ಕುರಿತು ಕೆಲಸ ಆಗಿದೆ, ಆಗಿಲ್ಲವೆಂಬ ಮಾಹಿತಿ ಕೊಡಬೇಕು. ರೈತರ,ಕೂಲಿಕಾರ್ಮಿಕರ ಅಶೋತ್ತರಗಳಿಗೆ ಸ್ಪಂದಿಸಿದಾಗ ಅನುಕೂಲವಾಗಲಿದೆ ಎಂದರು.

ಮುಂದಿನ ಜನಸಂಪರ್ಕ ಸಭೆಗೂ ಮುನ್ನ ಅರ್ಜಿಗಳ ಕುರಿತು ಏನೇನೂ ಕೆಲಸ ಆಗಿದೆ ಎಂಬುದರ ಬಗ್ಗೆ ಇಲಾಖಾ ಅಧಿಕಾರಿಗಳು ಸಮಗ್ರ ವರದಿ ಕೊಡಬೇಕು. ತಾಲೂಕಿನಲ್ಲಿ ಸಾವಿರಾರು ಪೌತಿ ಖಾತೆಗಳು ಬಾಕಿಯಿದ್ದು, ಅರ್ಜಿಗಳನ್ನು ಪರಿಶೀಲಿಸಿ ಖಾತೆ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬಹುತೇಕ ಕಡೆಗಳಲ್ಲಿ ಸ್ಮಶಾನಕ್ಕೆ ಹೋಗಲು ದಾರಿಯಿಲ್ಲ. ಅಧಿಕಾರಿಗಳು ಮುತುವರ್ಜಿ ವಹಿಸಿ ರಸ್ತೆ ಸೌಲಭ್ಯ ದೊರಕಿಸಿ ಕೊಡಬೇಕು. ತಾಲೂಕಿಗೆ ಈಗಾಗಲೇ 4 ಸಾವಿರ ಮನೆಗಳು ಮಂಜೂರಾಗಿದ್ದು, ಅಧಿಕಾರಿಗಳು ಮುಖಂಡರ ಪ್ರಭಾವಕ್ಕೆ ಒಳಗಾಗದೇ ನಿವೇಶನ ರಹಿತರನ್ನು ಗುರುತಿಸಿ ಪಕ್ಷಾತೀತವಾಗಿ ಮನೆಗಳನ್ನು ಕೊಡಬೇಕು. ತಾಲೂಕಿನ ಬಹುತೇಕ ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್‌ಗಳ ಸಮಸ್ಯೆಯಿದ್ದು, ಇದನ್ನು ಸರಿಪಡಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ತಾಕೀತು ಮಾಡಿದರು.

ತಾಲೂಕಿನಾದ್ಯಂತ ಅಲ್ಲಲ್ಲಿ ಕಳವು ಪ್ರಕರಣಗಳು ನಡೆಯುತ್ತಿದ್ದು, ಪೋಲಿಸ್‌ ಇಲಾಖೆ ಅಧಿಕಾರಿಗಳು ನಾಗರಿಕ ಸಮಾಜದ ಬಗ್ಗೆ ಕಾಳಾಜಿ ವಹಿಸಿ ಕಳನ್ನರನ್ನು ಬಂಧಿಸುವಂತೆ ತಿಳಿಸಿದರು.

ಎಸಿ ಗೋಟೂರು ಶಿವಪ್ಪ ಮಾತನಾಡಿ, ಎಲ್ಲ ಸೌಲಭ್ಯಗಳು ಸರಳ ಪ್ರಕ್ರಿಯೆ ಮೂಲಕ ಪಾರದರ್ಶಕವಾಗಿ ರೈತರಿಗೆ ಸಿಗಬೇಕು ಎಂಬುದು ಸರ್ಕಾರಗಳ ಆಶಯವಾಗಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ನ್ಯಾಯಾಲಯದ ಪ್ರಕರಣಗಳಲ್ಲಿ ರೈತರಿಗೆ ತ್ವರಿತ ಗತಿಯಲ್ಲಿ ಪರಿಹಾರ ನೀಡಲು ಸರ್ಕಾರ ನಿರ್ದೇಶನ ನೀಡಿದೆ ಎಂದರು.

ತಹಸೀಲ್ದಾರ್‌ ಶಿರಿನ್‌ ತಾಜ್‌ ಮಾತನಾಡಿ, ಬಗರ್‌ ಹುಕುಂ ಸಮಿತಿ ಮೂಲಕ ಸಾಗುವಳಿ ಚೀಟಿ ನೀಡಿಲು ಕ್ರಮ ಕೈಗೊಳ್ಳಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಖಾತೆ ಮಾಡಿಕೊಡುವುದಾಗಿ ತಿಳಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಡಿಡಿಪಿಐ ಗಿರಿಜಾ, ಡಿವೈಎಸ್‌ಪಿ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಪಿ,ಸಿ.ಕೃಷ್ಣಾರೆಡ್ಡಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಯ್ಯ, ಬೆಸ್ಕಾಂ ಇಇ ಜಗದೀಶ್‌, ತಾಪಂ ಇಒ ಲಕ್ಷ್ಮಣ್‌, ಆಡಳಿತಾಧಿಕಾರಿ ಸೋನಿಯಾ ಮರ್ಣಿಕರ್‌, ಸಣ್ಣ ನೀರಾವರಿ ಇಲಾಖೆ ಎಇಇ ತಿಪ್ಪೇಸ್ವಾಮಿ ಅನೇಕರಿದ್ದರು.