ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ: ರಾಯರಡ್ಡಿ

| Published : Jan 23 2025, 12:50 AM IST

ಸಾರಾಂಶ

ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ. ಹಲವಾರು ಅಭಿವೃದ್ಧಿ ಕಾರ್ಯ ಆಗಿವೆ.

ಹೊಸ ಜಿನುಗು ಕೆರೆಯ ನಿರ್ಮಾಣ ಕಾಮಗಾರಿಗೆ ಚಾಲನೆ । ಗದಗ ಕ್ಷೇತ್ರದ ತಿಮ್ಮಾಪೂರ ಅಭಿವೃದ್ಧಿಗೆ ಜನರ ಮನವಿಕುಕನೂರು:

ಯಲಬುರ್ಗಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ. ಹಲವಾರು ಅಭಿವೃದ್ಧಿ ಕಾರ್ಯ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಸಿದ್ನೇಕೊಪ್ಪ-ಯರೇಹಂಚಿನಾಳ ₹೩.೨೦ ಕೋಟಿ, ಸೋಂಪೂರ-ಮಾಳೆಕೊಪ್ಪದಲ್ಲಿ ₹೩.೨೦ ಕೋಟಿ ವೆಚ್ಚದ ಬ್ರಿಜ್ಜ್ ಕಂ ಬ್ಯಾರೇಜ ಹಾಗೂ ನಿಟ್ಟಾಲಿ ಗ್ರಾಮದಲ್ಲಿ ₹೨.೫೦ ಕೋಟಿ ವೆಚ್ಚದಲ್ಲಿ ಹೊಸ ಜಿನುಗು ಕೆರೆಯ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ವಿಶೇಷವಾಗಿ ಯಲಬುರ್ಗಾ ಕ್ಷೇತ್ರಕ್ಕೆ ಅನುದಾನಕ್ಕೆ ಬರವಿಲ್ಲ. ಪ್ರತಿ ಗ್ರಾಮದಲ್ಲಿ ಮಹಿಳೆಯರು ಶೌಚಾಲಯವನ್ನು ಕಟ್ಟಿಸಿ ಎಂದು ನನ್ನ ಬಳಿ ಬರುತ್ತಾರೆ. ಗ್ರಾಪಂಯಿಂದ ₹೧೨-೧೫ ಸಾವಿರ ವರೆಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಮನೆಯ ಪುರುಷರು ಬೆಲೆ ಬಾಳುವ ಮೊಬೈಲ್, ಬಂಗಾರ ಇಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಶೌಚಾಲಯ ಕಟ್ಟಿಸುತ್ತಿಲ್ಲ. ಪುರುಷರಿಗೆ ಪಾಠ ಕಲಿಸಬೇಕೆಂದರೆ ಶೌಚಾಲಯ ಕಟ್ಟಿಸುವವರೆಗೂ ಮನೆಯಿಂದ ಅವರನ್ನು ಮಹಿಳೆಯರು ಹೊರಹಾಕಬೇಕೆಂದರು.

ಮಂಡಲಗೇರಿ ಗ್ರಾಪಂ ಹಣ ದುರ್ಬಳಕೆ:

ಮಂಡಲಗೇರಿ ಗ್ರಾಪಂ ಪಿಡಿಒ ಮನೋರಮ್ಮ ಅಂಗನವಾಡಿ ಕಟ್ಟಡಕ್ಕೆ ಬಂದಿದ್ದ ₹೮ ಲಕ್ಷ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಅಲ್ಲದೆ ಯರೇಹಂಚಿನಾಳ ಗ್ರಾಪಂಗೂ ಸಹ ಮನೋರಮ್ಮ ಪಿಡಿಒ ಆಗಿದ್ದು, ಸಭೆಗೆ ಗೈರಾಗಿದ್ದು, ಪಿಡಿಒ ಯಾಕೆ ಬಂದಿಲ್ಲ ಎಂದು ಶಾಸಕರು ಪ್ರಶ್ನಿಸಿದರು.ಅಭಿವೃದ್ಧಿಗೆ ನಾನೇ ಗದಗ ಕ್ಷೇತ್ರಕ್ಕೆ ನಿಲ್ತಿನಿ, ಎಚ್.ಕೆ. ಪಾಟೀಲರು ಇಲ್ಲಿ ನಿಲ್ಲಲಿ:

ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಒಂದು ಸಮುದಾಯ ಭವನ ಮಾಡಬೇಕೆಂದು ಮನವಿ ಮಾಡಿದರು. ಅಲ್ಲದೆ ಅದಕ್ಕೆ ಬೇಕಾದ ಭೂಮಿಯನ್ನು ಸಹ ನಿಗದಿ ಮಾಡಿಕೊಂಡು ಬಂದಿದ್ದೇವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ರಾಯರಡ್ಡಿ ಬಿನ್ನಾಳ ಗ್ರಾಮಕ್ಕೆ ಸಮುದಾಯ ಭವನ ಮಂಜೂರು ಮಾಡಿಸಿದ್ದೇನೆ. ಬಿನ್ನಾಳ ಗ್ರಾಮದವರು ಯಾರು ಭೂಮಿ ನೀಡಲು ಮುಂದೆ ಬರುತ್ತಿಲ್ಲ. ತಿಮ್ಮಾಪೂರ ಗ್ರಾಮಸ್ಥರು ಬಿನ್ನಾಳ ಗ್ರಾಮದ ಸಮುದಾಯ ಭವನವನ್ನು ತಿಮ್ಮಾಪೂರದಲ್ಲಿ ಕಟ್ಟಿಸಿಕೊಳ್ಳುತ್ತೇವೆ ಎಂದು ಆ ಗ್ರಾಮದಲ್ಲಿ ಸಭೆ ಮಾಡಿ ಪತ್ರ ಪಡೆಯಿರಿ, ಬಿನ್ನಾಳ ಬಸವೇಶ್ವರ ಸಮುದಾಯ ಭವನ ಎಂದು ತಿಮ್ಮಾಪೂರದಲ್ಲಿ ಕಟ್ಟಿಸುತ್ತೇನೆ. ಅಲ್ಲದೆ ತಿಮ್ಮಾಪೂರದವರೆಗೆ ನಾನೇ ರಸ್ತೆ ಅಭಿವೃದ್ಧಿ ಮಾಡಿಸುತ್ತೇನೆ ಎಂದರು. ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಅಭಿವೃದ್ಧಿ ಬೇಕೆಂದರೆ ಮುಂದಿನ ಚುನಾವಣೆಗೆ ಎಚ್.ಕೆ. ಪಾಟೀಲ್ ಯಲಬುರ್ಗಾ ಕ್ಷೇತ್ರಕ್ಕೆ ನಿಲ್ಲಲಿ, ನಾನು ಗದಗ ಕ್ಷೇತ್ರಕ್ಕೆ ನಿಲ್ಲುತ್ತೇನೆ ಎಂದು ನಗೆಚಟಾಕೆ ಹಾರಿಸಿದರು.

ಸಣ್ಣ ನೀರಾವರಿ ಇಲಾಖೆಯ ಜಗನ್ನಾಥ, ತಹಸೀಲ್ದಾರ್ ಎಚ್. ಪ್ರಾಣೇಶ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ಆನಂದ ಉಳ್ಳಾಗಡ್ಡಿ, ಮುಖಂಡ ಮಂಜುನಾಥ ಸೋಂಪೂರ, ವಕ್ತಾರ ಶಿವನಗೌಡ ದಾನರೆಡ್ಡಿ, ಜಿಪಂ ಮಾಜಿ ಸದಸ್ಯ ಅಶೋಕ ತೋಟದ್, ಜೆಇ ಪ್ರಕಾಶ ಪಾಟೀಲ್, ಮಲ್ಲು ಜಕ್ಕಲಿ, ಸಂತೋಷ ಬನ್ನಿಕೊಪ್ಪ, ರವಿ ಭಜಂತ್ರಿ, ಶಿವು ಆದಾಪೂರ, ಮಹೇಶ ಗಾವರಾಳ, ಶ್ರೀನಿವಾಸ ದೇಸಾಯಿ, ಬಸವರಾಜ ಅಂಗಡಿ ಸೇರಿದಂತೆ ಅನೇಕರು ಇದ್ದರು.