ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

| Published : Feb 20 2025, 12:48 AM IST

ಸಾರಾಂಶ

ಪರಕೀಯರ ದಾಳಿಯಿಂದ ಭಾರತ ದೇಶ ಮತ್ತು ಹಿಂದೂ ಧರ್ಮ, ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಅದಮ್ಯ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಪರಕೀಯರ ದಾಳಿಯಿಂದ ಭಾರತ ದೇಶ ಮತ್ತು ಹಿಂದೂ ಧರ್ಮ, ಸಂಸ್ಕೃತಿಯನ್ನು ರಕ್ಷಣೆ ಮಾಡಿದ ಅದಮ್ಯ ದೇಶಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವ ರಾವ್ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಮಾತೆ ಜಿಜಾಬಾಯಿಯವರಿಗೆ ಜನಿಸಿದ ಶಿವಾಜಿ ಮಹಾರಾಜರು ಸಮರ್ಥ ಗುರುಗಳ ಮಾರ್ಗದರ್ಶನದಲ್ಲಿ ಬೆಳೆದರು. ಸ್ವರಾಜ್ಯದ ಕನಸು ಕಂಡು ಗೆರಿಲ್ಲಾ ಎಂಬ ಯುದ್ಧ ತಂತ್ರವನ್ನು ಪ್ರಪಂಚಕ್ಕೆ ಪರಿಚಯಿಸಿದರು. ಶಿವಾಜಿ ಮಹಾರಾಜರ ಸೈನ್ಯ ಚಿಕ್ಕದಾದರೂ ಬಹಳ ಪರಾಕ್ರಮಿ ಸರದಾರರಿದ್ದರು. ಪರಕೀಯರನ್ನು ಸೋಲಿಸಿ 40 ಕೋಟೆಗಳಿಂದ 400ಕೋಟೆಗಳವರೆಗೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿ ಪರಕೀಯರಿಂದ ನಮ್ಮ ದೇಶವನ್ನು ರಕ್ಷಣೆ ಮಾಡುವುದರ ಜೊತೆಗೆ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿದರು, ಅಂತಹ ವೀರ ಪರಾಕ್ರಮಿ ಚರಿತ್ರೆಯಿಲ್ಲದೇ ಭಾರತದ ಇತಿಹಾಸ ಪೂರ್ಣವಾಗುವುದಿಲ್ಲ ಎಂದರು.

ನಗರದ ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ. ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಧರ್ಮದ ಐಕಾನ್ ಆಗಿದ್ದರು, ಹಿಂದೂ ಧರ್ಮಕ್ಕೆ ತನ್ನದೇ ಆದ ತಾತ್ವಿಕ ತಳಹದಿಯನ್ನು ಹಾಕುವುದರ ಮೂಲಕ ಹಿಂದೂ ಧರ್ಮವನ್ನು ಸಂರಕ್ಷಣೆ ಮಾಡಿದ ಮಹಾವೀರ ಎಂದು ತಿಳಿಸಿದರು.

ಹಿಂದೂ ಮುಖಂಡ ಎ.ಪಿ.ಕೃಷ್ಣಪ್ಪ ಮಾತನಾಡಿ, ಧರ್ಮರಕ್ಷಕ, ನಿಸ್ವಾರ್ಥಿ, ಸ್ತ್ರೀಯರನ್ನು ಗೌರವಿಸುವ ನಾಯಕರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು 34 ವರ್ಷಗಳ ಕಾಲ ಸತತವಾಗಿ ಹೋರಾಟವನ್ನು ಮಾಡಿ ಧರ್ಮ, ದೇಶ, ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ,ತಾಲೂಕು ಪ್ರಗತಿಪರ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ, ಸಾಹಿತಿ ಕೂ.ಗಿ. ಗಿರಿಯಪ್ಪ, ಮರಾಠ ಸಮುದಾಯದ ಮುಖಂಡ ಉಮೇಶ್ ರಾವ್, ಮುಕುಂದ ರಾವ್, ವಸಂತ ರಾವ್, ವಿಜಯಕುಮಾರ್, ತುಕಾರಾಂ ರಾವ್,ವಿಶ್ವನಾಥ್ ರಾವ್, ಶಂಕರ್ ನಾರಾಯಣ್, ಜಯಂತ್ ರಾವ್, ತುಕಾರಾಂ ರಾವ್, ಮುರುಳಿ, ವಿನೋದ್ ರಾವ್, ಚಂದ್ರಬಾಯಿ, ಪದ್ಮಭಾಯಿ, ವಿಮಲಾಬಾಯಿ, ಯುವಶಕ್ತಿ ವೇದಿಕೆ ಶ್ರೀನಿವಾಸ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ, ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.