ಫೇಸ್‌ಬುಕ್‌ನಲ್ಲಿ ಲಘು ಪದ ಬಳಕೆ: ರಾಜಶೇಖರಮೂರ್ತಿ ಕ್ಷಮೆ

| Published : Feb 20 2025, 12:48 AM IST

ಸಾರಾಂಶ

ಜಾಲತಾಣದಲ್ಲಿ ಮಾಜಿ ಸಚಿವ ಎನ್.ಮಹೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ಲಘು ಪದ ಬಳಸಿ ವಿವಾದಕ್ಕೀಡಾಗಿದ್ದ ದಲಿತ ಮುಖಂಡ ರಾಜಶೇಖರಮೂರ್ತಿ ಕೊನೆಗೂ ತಮ್ಮ ತಪ್ಪಿನ ಅರಿವಾದ ಹಿನ್ನೆಲೆ ಕ್ಷಮೆ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಜಾಲತಾಣದಲ್ಲಿ ಮಾಜಿ ಸಚಿವ ಎನ್.ಮಹೇಶ್ ಹಾಗೂ ಅವರ ಬೆಂಬಲಿಗರ ವಿರುದ್ಧ ಲಘು ಪದ ಬಳಸಿ ವಿವಾದಕ್ಕೀಡಾಗಿದ್ದ ದಲಿತ ಮುಖಂಡ ರಾಜಶೇಖರಮೂರ್ತಿ ಕೊನೆಗೂ ತಮ್ಮ ತಪ್ಪಿನ ಅರಿವಾದ ಹಿನ್ನೆಲೆ ಕ್ಷಮೆ ಕೋರಿದ್ದಾರೆ.ಕೊಳ್ಳೇಗಾಲ ಪಟ್ಟಣದಲ್ಲಿ ನಡೆದ ನಾರಾಯಣಸ್ವಾಮಿ ತೇರಿನ ಹಬ್ಬದ ಹಿನ್ನೆಲೆ ಬೀಮನಗರದ ಮಾಜಿ ಯಜಮಾನ ವರದರಾಜು ಅವರ ಕರೆಯ ಮೇರೆಗೆ ಅವರ ನಿವಾಸಕ್ಕೆ ತೆರಳಿದ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ‌ಎನ್.ಮಹೇಶ್‌ರನ್ನು ಫೇಸ್ ಬುಕ್ ಖಾತೆಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ, ಮಾಜಿ ಸಚಿವರನ್ನು ಆಹ್ವಾನಿಸಿದವರನ್ನು ಲಘು ಪದ ಬಳಸಿ ಫೆ.16ರಂದು ರಾಜಶೇಖರಮೂರ್ತಿ ಟೀಕಿಸಿದ್ದರು. ಈ ಹಿನ್ನೆಲೆ ರಾಜಶೇಖರಮೂರ್ತಿ ಟೀಕೆಗೆ ಬೇಸರಗೊಂಡು ಕೆರಳಿದ ಮಾಜಿ ಯಜಮಾನ ವರದರಾಜು, ಬಿಜೆಪಿ ಎಸ್ಸಿ ಮೋರ್ಚಾದ ಸಿದ್ದಪ್ಪಾಜಿ, ನಗರಸಭೆ ಮಾಜಿ ಸದಸ್ಯರಾದ ಚಂದ್ರಶೇಖರ್, ಕೆಕೆ ಮೂರ್ತಿ ಇನ್ನಿತರರು ಈ ಸಂಬಂಧ ಫೆ.17ರಂದು ಪಟ್ಟಣ ಠಾಣೆಯ ಪಿಎಸ್ಸೈ ವರ್ಷ ಅವರಿಗೆ ಲಿಖಿತ ದೂರು ನೀಡಿದ್ದರು. ಹಿಂದಿನಿಂದಲೂ ಲಘು ಪದ ಬಳಕೆ ಮಾಡಿ ಟೀಕಿಸುವುದೇ ಇವರ ಚಾಳಿಯಾಗಿದ್ದು ಕಠಿಣ ಕ್ರಮಕೈಗೊಳ್ಳುವಂತೆ ಲಿಖಿತ ದೂರು ಸಲ್ಲಿಸಿದ ಬೆನ್ನಲ್ಲೆ ಫೆ.17ರ ರಾತ್ರಿ ನನ್ನ ಫೇಸ್ ಬುಕ್ ನಕಲಿ ಮಾಡಿ ಕೆಲವು ಕಿಡಿಗೇಡಿಗಳು ಪೋಸ್ಟ್ ಹರಿಬಿಟ್ಟಿದ್ದಾರೆ ಎಂದು ರಾಜಶೇಖರಮೂರ್ತಿ ಮತ್ತೊಂದು ಪೋಸ್ಟ್ ಹಾಕುವ ಮೂಲಕ ಸಮರ್ಥಿಸಿಕೊಂಡಿದ್ದರು.

ವಿಡಿಯೋ ಮೂಲಕ ಕ್ಷಮೆಯಾಚಿಸಿದ ಮೂರ್ತಿ

ಈ ಸಂಬಂಧ ಪಟ್ಟಣ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರಿನ ಹಿನ್ನೆಲೆ ರಾಜಶೇಖರಮೂರ್ತಿ ವಿರುದ್ಧ ದೂರು ದಾಖಲಾಗಿದ್ದು ಈ ಸಂಬಂಧ ಪಿಎಸ್ಸೈ ವರ್ಷ ಬುದ್ಧಿವಾದ ಹೇಳಿದ್ದಾರೆ. ಇಂತಹ ಟೀಕೆಗಳಿಂದ ಅನೇಕ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಮುಂದೆ ಈ ರೀತಿ ನಡೆದುಕೊಳ್ಳುವಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೆ ರಾಜಶೇಖರಮೂರ್ತಿ ಜಾಲತಾಣದಲ್ಲಿ ಟೀಕಿಸಿದ್ದಕ್ಕಾಗಿ ಕ್ಷಮೆ ಕೋರುವ ಮೂಲಕ ವಿಡಿಯೋ ಹರಿಬಿಟ್ಟು ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.