ಅನುದಾನದ ಕೊರತೆ: 5 ವರ್ಷದಿಂದ ಉದ್ಘಾಟನೆ ಆಗದ ನವಲಿ ಬಸ್‌ ನಿಲ್ದಾಣ

| Published : Feb 20 2025, 12:48 AM IST

ಅನುದಾನದ ಕೊರತೆ: 5 ವರ್ಷದಿಂದ ಉದ್ಘಾಟನೆ ಆಗದ ನವಲಿ ಬಸ್‌ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

1.10 ಎಕರೆ ಗುಂಟೆ ಜಾಗದಲ್ಲಿ ಅಂದಿನ ಶಾಸಕ ಬಸವರಾಜ ದಢೇಸೂಗುರು ಅವರು ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ಸುಸಜ್ಜಿತ ಕಟ್ಟಡ ಮಾತ್ರ ನಿರ್ಮಿಸಲಾಗಿದೆ. ಉಳಿದಂತೆ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಬಸ್‌ ನಿಲ್ಲಲು ಪ್ಲಾಟ್‌ಫಾರ್ಮ್‌ ನಿರ್ಮಿಸಲು ಅನುದಾನದ ಕೊರೆತೆಯಿಂದ ಕಳೆದ ಐದು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ.

ಅಮರಪ್ಪ ಕುರಿ

ನವಲಿ:

ಈಶಾನ್ಯ ಕರ್ನಾಟಕ ರಸ್ತೆ ನಿಗಮದಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿ ₹ 60 ಲಕ್ಷ ವೆಚ್ಚದಲ್ಲಿ 2020ರಲ್ಲಿ ನವಲಿ ಗ್ರಾಮದಲ್ಲಿ ನಿರ್ಮಿಸಿದ್ದ ಬಸ್‌ ನಿಲ್ದಾಣ ಅರೆಬರೆ ಕಾಮಗಾರಿಯಿಂದಾಗಿ ಉದ್ಘಾಟನೆಯಾಗದೆ ಪಾಳುಬಿದ್ದಿದೆ. ಇದರಿಂದ ನಿಲ್ದಾಣ ಖಾಸಗಿ ವಾಹನ ನಿಲುಗಡೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದೆ.ಸುಸಜ್ಜತ ಕಟ್ಟಡ:

1.10 ಎಕರೆ ಗುಂಟೆ ಜಾಗದಲ್ಲಿ ಅಂದಿನ ಶಾಸಕ ಬಸವರಾಜ ದಢೇಸೂಗುರು ಅವರು ಬಸ್‌ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ಸುಸಜ್ಜಿತ ಕಟ್ಟಡ ಮಾತ್ರ ನಿರ್ಮಿಸಲಾಗಿದೆ. ಉಳಿದಂತೆ ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಸೇರಿದಂತೆ ಬಸ್‌ ನಿಲ್ಲಲು ಪ್ಲಾಟ್‌ಫಾರ್ಮ್‌ ನಿರ್ಮಿಸಲು ಅನುದಾನದ ಕೊರೆತೆಯಿಂದ ಕಳೆದ ಐದು ವರ್ಷದಿಂದ ಕಾಮಗಾರಿ ಸ್ಥಗಿತವಾಗಿದೆ. ಇದೀಗ ಸುಸಜ್ಜಿತ ಕಟ್ಟಡವೂ ನಿರ್ವಹಣೆ ಕೊರತೆಯಿಂದ ಗಿಡ-ಗಂಟಿ ಬೆಳೆದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.

ಸ್ಲ್ಯಾಬ್‌ ಇಲ್ಲ:

ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅದಕ್ಕೆ ಸ್ಲ್ಯಾಬ್‌ ಹಾಕಿಯೇ ಇಲ್ಲ. ಜತೆಗೆ ನೀರಿನ ಸೌಲಭ್ಯ ಕಲ್ಪಿಸದೇ ಹಾಗೇ ಬಿಡಲಾಗಿದೆ. ಇದರಿಂದ ಶೌಚಾಲಯ ಹಾಗೂ ಮೂತ್ರಾಲಯಗಳು ಒಡೆದ ಹೋಗಿವೆ. ಕಟ್ಟಡದ ಆವರಣದಲ್ಲಿ ಗಿಡಗಂಟಿ ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.ಪ್ಲಾಟ್‌ಫಾರ್ಮ್‌ ಇಲ್ಲ:

ಸುಸಜ್ಜಿತ ಬಸ್‌ ನಿಲ್ದಾಣವನ್ನು ನಿರ್ಮಿಸಿರುವ ಈಶಾನ್ಯ ಕರ್ನಾಟಕ ರಸ್ತೆ ನಿಗಮವು ಬಸ್‌ ನಿಲುಗಡೆ ಬೇಕಾದ ಪ್ಲಾಟ್‌ಫಾರ್ಮ್‌ನ್ನು ಅನುದಾನದ ಕೊರೆತೆಯಿಂದ ನಿರ್ಮಿಸಿಲ್ಲ. ಹೀಗಾಗಿ ಅರೆಬರೆ ಕಾಮಗಾರಿ ಮಾಡಲಾಗಿದೆ. ಹೀಗಾಗಿ ಬಸ್‌ನಿಲ್ದಾಣವನ್ನು ಉದ್ಘಾಟನೆ ಮಾಡಿದ ಹಿನ್ನೆಲೆ ಬಸ್‌ಗಳು ನಿಲ್ದಾಣದ ಹೊರಗಡೆಯಿಂದಲೇ ಸಂಚರಿಸುತ್ತಿವೆ. ಇದರಿಂದ ಬಸ್‌ ನಿಲ್ದಾಣವು ಖಾಸಗಿ ವಾಹನಗಳ ನಿಲುಗಡೆ ಪ್ರದೇಶವಾಗಿ ಮಾರ್ಪಟ್ಟರು ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.

ಬಸ್‌ ನಿಲ್ದಾಣದ ಉಳಿದ ಕಾಮಗಾರಿಗೆ ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡುವ ಜತೆಗೆ ಪ್ರಯಾಣಿಕರಿಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.ನವಲಿ ಬಸ್ ನಿಲ್ದಾಣ ಗ್ರಾಪಂನ ಕಸ ವಿಲೇವಾರಿ ಕೇಂದ್ರವಾಗಿದೆ. ತಕ್ಷಣ ಸಚಿವರು ಅನುದಾನ ಬಿಡುಗಡೆ ಉಳಿದ ಕಾಮಗಾರಿ ನಿರ್ಮಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಕೊಡಬೇಕು ಎಂದು ನವಲಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಿವಯ್ಯ ಸ್ವಾಮಿ ಹೇಳಿದರು.ಉಳಿದ ಕಾಮಗಾರಿಗೆ ಅನುದಾನದ ಅವಶ್ಯಕತೆ ಇದ್ದು ಸಚಿವರಾದ ಶಿವರಾಜ ತಂಗಡಗಿ ಅವರ ಆಪ್ತ ಸಹಾಯಕರ ಜತೆ ಚರ್ಚೆಸಿದ್ದೇನೆ. ಅನುದಾನ ಬಂದ ಕೂಡಲೇ ಟೆಂಡರ್‌ ಕರೆದು ಉಳಿದ ಕಾಮಗಾರಿ ಮುಗಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುವುದು ಈಶಾನ್ಯ ಕರ್ನಾಟಕ ರಸ್ತೆ ನಿಗಮ ಕೊಪ್ಪಳದ ಎಡ್ಲ್ಯೂ ವೆಂಕಟೇಶ ಹೇಳಿದರು.