ಕನಕಪುರ: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರಕ್ಕೆ ಜೂ.7ರಂದು ಭಾನುವಾರ ಆಗಮಿಸುತ್ತಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಅದ್ದೂರಿಯಾಗಿ ಸ್ವಾಗತಿಸಲು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.
ತಮ್ಮ ಕನಸು ನನಸಾಗಲು ಹರಿಸಿದ ಕ್ಷೇತ್ರದ ಜನತೆಗೆ ಕೃತಜ್ಞತಾ ಸಮರ್ಪಣೆ ಮಾಡಲು ಡಿಕೆಶಿ ಸ್ವಕ್ಷೇತ್ರದ ಪ್ರವಾಸ ಕೈಗೊಂಡಿದ್ದು ಅಂದು ಬೆಳ್ಳಗೆ 10.30ಕ್ಕೆ ತಮ್ಮ ಮನೆ ದೇವತೆ ಕೆಂಕೇರಮ್ಮ ತಾಯಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಕಬ್ಬಾಳಮ್ಮ ದೇವಾಲಯ ಸೇರಿದಂತೆ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.ಜೊತೆಗೆ ಹುಟ್ಟೂರಾದ ದೊಡ್ಡಹಾಲಹಳ್ಳಿಗೆ ತೆರಳುವರು. ಬೆಳಿಗ್ಗೆಯಿಂದ ಸಂಜೆವರೆಗೆ ಕ್ಷೇತ್ರದಲ್ಲಿ ಪ್ರವಾಸ ನಡೆಸಲಿರುವ ಡಿ.ಕೆ.ಶಿವಕುಮಾರ್ ಅವರು ಇಡೀ ದಿನ ಕನಕಪುರಕ್ಕೆ ತಾಲೂಕಿನ ಮತದಾರರು ಹಾಗೂ ಸಾರ್ವಜನಿಕರಿಗೆ ಮೀಸಲಿಟ್ಟಿದ್ದು
ಬೆಳಗ್ಗೆ 10 ಗಂಟೆಗೆ ಕಸಬಾ ಹೋಬಳಿಯ ತುಂಗಣಿ ಗ್ರಾಮದಿಂದ ತಮ್ಮ ಪ್ರವಾಸ ಆರಂಭಿಸಲಿರುವುದರಿಂದತುಂಗಣಿ ಬಳಿ ಪಕ್ಷದ ಮುಖಂಡರು, ಕಾರ್ಯಕರ್ತರು ಬೃಹತ್ ಹೂಮಾಲೆ ಹಾಕಿ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸ್ವಾಗತ ಕೋರಲಿದ್ದಾರೆ.
ನಂತರ ಪ್ರವಾಸ ನಗರದ ಎಂ.ಜಿ.ರಸ್ತೆ ಮೂಲಕ ಟಿ.ಬೇಕುಪ್ಪೆ ವೃತ್ತಕ್ಕೆ ತೆರಳಲಿದ್ದು, ಈಗಾಗಲೇ ಬೃಹತ್ ಬ್ಯಾನರ್‌ಗಳನ್ನು ಅಳವಡಿಸಿ ಸ್ವಾಗತ ಕೋರಲು ಸ್ಥಳೀಯ ಗ್ರಾಪಂ ವ್ಯಾಪ್ತಿಯ ಮತದಾರರು, ಪಕ್ಷದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲಿಂದ ನಾರಾಯಣಪುರ ಗ್ರಾಮಕ್ಕೆ ಆಗಮಿಸುವ ಮುಖ್ಯಮಂತ್ರಿ ಡಿಕೆಶಿ ಅವರಿಗೆ ಗ್ರಾಮಸ್ಥರಿಂದ ಹೂವಿನ ಸುರಿಮಳೆ ಮೂಲಕ ಅದ್ದೂರಿ ಸ್ವಾಗತ ನೀಡಲಾಗುವುದು.
ಡಿಕೆಶಿಯವರಿಗೆ ಪ್ರತಿ ಚುನಾವಣೆಯಲ್ಲಿ ಶಕ್ತಿ ತುಂಬುವ ಹಾಗೂ ಅವರ ಅಚ್ಚುಮೆಚ್ಚಿನ ಗ್ರಾಮವಾದ ಕೋಡಿಹಳ್ಳಿ ಗ್ರಾಮದ ವೃತ್ತದಲ್ಲಿ ಈಗಾಗಲೇ ಹತ್ತಾರು ಅಡಿ ಎತ್ತರದ ಕಟೌಟ್‌ಗಳನ್ನು ನಿಲ್ಲಿಸಿ ಊರಿನ ತುಂಬಾ ಸ್ವಾಗತದ ಬ್ಯಾನರ್ ಗಳನ್ನು ಹಾಕಲಾಗಿದೆ. ಮುಖ್ಯಮಂತ್ರಿಯಾಗಿ ತಮ್ಮ ಸ್ವಕ್ಷೇತ್ರಕ್ಕೆ ಆಗಮಿಸುತ್ತಿರುವ ತಮ್ಮ ನೆಚ್ಚಿನ ನಾಯಕನಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡುವ ತಯಾರಿ ನಡೆಸಿದ್ದು ಡಿಕೆಶಿಯವರು ಇಲ್ಲಿ ಅರ್ಧ ಗಂಟೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಹೊಸದುರ್ಗ ಗ್ರಾಮಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಅರ್ಪಿಸಿದ ನಂತರ ಕೋಡಿಹಳ್ಳಿ ಗ್ರಾಮಕ್ಕೆ ಆಗಮಿಸಿ ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ಭೋಜನ ಸೇವಿಸಿ, ಸ್ವಲ್ಪ ಕಾಲ ವಿಶ್ರಾಂತಿ ಪಡದು ನಂತರ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ತವರೂರಾದ ಹೂಕುಂದ ಗ್ರಾಮಕ್ಕೆ ತೆರಳಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಅಲ್ಲಿಂದ ಮುಳ್ಳಹಳ್ಳಿ, ನಲ್ಲಹಳ್ಳಿ ಮೂಲಕ ತಮ್ಮ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮಕ್ಕೆ ಆಗಮಿಸುವ ಡಿಕೆಶಿ ತಮ್ಮ ಗ್ರಾಮ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಗ್ರಾಮದ ಹೆಮ್ಮೆಯ ಪುತ್ರ ಮುಖ್ಯಮಂತ್ರಿಯಾಗಿ ಗ್ರಾಮಕ್ಕೆ ಬರುವುದನ್ನು ನೋಡಲು ಗ್ರಾಮಸ್ಥರು ಕಾತುರರಾಗಿದ್ದಾರೆ. ದೊಡ್ಡ ಆಲಹಳ್ಳಿ ವೃತ್ತದಲ್ಲಿ ಈಗಾಗಲೇ ಡಿಕೆಶಿಯ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿ ರಸ್ತೆಯ ಇಕ್ಕೆಲಗಳಲ್ಲಿ ಸ್ವಾಗತ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಅದ್ದೂರಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ಸಂತಸವನ್ನು ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆಮನೆಗೂ ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.ದೊಡ್ಡ ಆಲಹಳ್ಳಿಯಲ್ಲಿ ಕಾರ್ಯಕ್ರಮ ಮುಗಿಸಿ ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್, ಸೋಮದ್ಯಾಪನಹಳ್ಳಿ, ಅಳ್ಳಿಮಾರನಹಳ್ಳಿ ಮೂಲಕ ನಗರದ ಮೇಗಳಬೀದಿಗೆ ಆಗಮಿಸುವ ಮುಖ್ಯಮಂತ್ರಿ ಡಿಕೆಶಿಯವರು ನಂತರ
ಚನ್ನಬಸಪ್ಪ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದು ಕೃತಜ್ಞತೆಯನ್ನು ಅರ್ಪಿಸುವರು. ನಗರಾದ್ಯಂತ ಈಗಾಗಲೇ ರಸ್ತೆಯ ತುಂಬೆಲ್ಲಾ ಶುಭಾಶಯ ಹಾಗೂ ಅಭಿನಂದನಾ ಬ್ಯಾನರ್‌ಗಳು ರಾರಾಜಿಸುತ್ತಿವೆ. ಸ್ಥಳೀಯ ಮುಖಂಡರು ಹಾಗೂ ನಗರಸಭಾ ಸದಸ್ಯರ ನೇತೃತ್ವದಲ್ಲಿ ನಗರದ ಪ್ರತಿ ವಾರ್ಡಿನ ಮನೆಗಳಿಗೂ ಸಿಹಿ ವಿತರಣೆ ಮಾಡಲಾಗಿದ್ದು, ಭಾನುವಾರ ನಡೆಯುವ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕರಪತ್ರಗಳನ್ನು ನೀಡಿ ಆಹ್ವಾನಿಸಿದ್ದಾರೆ.ತಾಲೂಕಾದ್ಯಂತ ಮುಖ್ಯಮಂತ್ರಿ ಡಿಕೆಶಿ ಪ್ರವಾಸ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಸೂಕ್ತ ಬಂದೋಬಸ್ತ್ ಏರ್ಪಿಡಿಸಿದೆ. ನೂರಾರು ಸಿಬ್ಬಂದಿಯನ್ನು ಪ್ರವಾಸ ತೆರಳುವ ಮಾರ್ಗದಲ್ಲಿ ನಿಯೋಜಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 30 ನಿಮಿಷ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ಯಾವುದೇ ಗೊಂದಲ, ಅನಾಹುತಗಳು ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತೆಗೆದುಕೊಂಡಿದ್ದಾರೆ.
ಕೆ ಕೆ ಪಿ ಸುದ್ದಿ 01:ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಗ್ರಾಮ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಡಿಕೆಶಿಯವರ ಬೃಹತ್ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿರುವುದು.