ಸಾರಾಂಶ
2025ರ ಜನವರಿಯಲ್ಲಿ ಶಿರಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಅವರ ಸಮ್ಮುಖದಲ್ಲಿ ಸುಮಾರು 15 ರಿಂದ 20 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಕಲ್ಪ ಮಾಡಿದ್ದು, ಅಧಿಕಾರಿ, ನೌಕರರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ಶಿರಾದಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಶಾಸಕ ಟಿ.ಬಿ.ಜಯಚಂದ್ರ ಮಾಹಿತಿ । ಕೆಡಿಪಿ ಸಭೆ
ಕನ್ನಡಪ್ರಭ ವಾರ್ತೆ ಶಿರಾ 2025ರ ಜನವರಿಯಲ್ಲಿ ಶಿರಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಅವರ ಸಮ್ಮುಖದಲ್ಲಿ ಸುಮಾರು 15 ರಿಂದ 20 ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವ ಸಂಕಲ್ಪ ಮಾಡಿದ್ದು, ಅಧಿಕಾರಿ, ನೌಕರರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಜತೆಗೆ ಅವರಿಗೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕೆಂದು ಕಳೆದ 10 ವರ್ಷಗಳ ಹಿಂದೆಯೇ ಯೋಜನೆ ರೂಪಿಸಿ 600 ರಿಂದ 700 ಎಕರೆ ಜಮೀನನ್ನು ಗುರುತಿಸಲಾಗಿತ್ತು. ಈ ಜಮೀನುಗಳಲ್ಲಿ ಕೆಲವು ಜಮೀನುಗಳ ತಾಂತ್ರಿಕ ಸಮಸ್ಯೆಗಳಿಂದ ಇದುವರೆವಿಗೂ ನಿವೇಶನಗಳನ್ನು ವಿಂಗಡಣೆ ಮಾಡಲಾಗದೆ ನೆನಗುದಿಗೆ ಬಿದ್ದಿದೆ ಎಂದರು. ಅಧಿಕಾರಿ ಮತ್ತು ನೌಕರರು ಇವುಗಳನ್ನು ಸರಿಪಡಿಸದೆ ಕಾಲಹರಣ ಮಾಡುತ್ತಿರುವುದರಿಂದ ಬಡವರಿಗೆ ನಿವೇಶನ ಹಂಚಲು ಸಾಧ್ಯವಾಗಿಲ್ಲ. ಆದರೆ ಈಗ ನಿವೇಶನ ನೀಡಲೇಬೇಕೆಂದು ಪಣತೊಟ್ಟಿದ್ದು, ಜನವರಿ 17 ಅಥವಾ 18 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಿರಾಕ್ಕೆ ಆಹ್ವಾನಿಸಲಾಗಿದ್ದು, ಬರುವುದಾಗಿ ಹೇಳಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ಕಂದಾಯ ಇಲಾಖೆಯಿಂದ ಹಸ್ತಾಂತರವಾಗಿರುವ ಜಮೀನುಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳುಹಿಸಿ ನಿವೇಶನ ವಿಂಗಡಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ತಾಂತ್ರಿಕ ಸಮಸ್ಯೆ ಇರುವ ಜಮೀನುಗಳನ್ನು ಇನ್ನೊಂದು ವಾರದಲ್ಲಿ ತಹಸೀಲ್ದಾರ್, ಇಒ, ಪಿಡಿಒ, ಗ್ರಾಮ ಲೆಕ್ಕಿಗರು ಎಲ್ಲರೂ ಸೇರಿ ಸರಿಪಡಿಸಬೇಕು. ಇದಕ್ಕೊಂದು ಪ್ರತ್ಯೇಕ ವಾಟ್ಸಾಪ್ ಗ್ರೂಪ್ ಮಾಡಿ ದೈನಂದಿನ ಬೆಳವಣಿಗೆಗಳನ್ನು ಇಲ್ಲಿಯೇ ಚರ್ಚಿಸಿ ಸರಿಪಡಿಸಬೇಕು. ಮುಂದಿನ ವಾರ ಮತ್ತೊಮ್ಮೆ ನಾನು ನಿವೇಶನಕ್ಕೆ ಸಂಬಂಧಿಸಿದಂತೆ ಸಭೆ ಕರೆಯುತ್ತೇನೆ. ಅಂದು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿರಬೇಕು ಎಂದು ತಿಳಿಸಿದರು. ಜಿಪಂ ಸಿಇಒ ಪ್ರಭು ಮಾತನಾಡಿ, ಗ್ರಾಪಂಗಳಲ್ಲಿ ಗ್ರಾಮ ಸಭೆಗಳನ್ನು ಮಾಡುವ ಮೂಲಕ ನಿವೇಶನ ರಹಿತರನ್ನು ಆಯ್ಕೆ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಸಿಗಬೇಕು. ನಿವೇಶನ ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಬೇಕು. ಆಯ್ಕೆ ಪ್ರಕ್ರಿಯೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗುವುದು, ತಹಸೀಲ್ದಾರ್, ಇಒ, ಪಿಡಿಒ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ನಿವೇಶನ ರಹಿತರನ್ನು ಆಯ್ಕೆ ಮಾಡಬೇಕು. ಅದು ಸರ್ಕಾರದ ಮಾರ್ಗಸೂಚಿ ಅನುಸಾರ ಇರಬೇಕು ಎಂದು ತಿಳಿಸಿದರು. ತಹಸೀಲ್ದಾರ್ ಸಚ್ಚಿದಾನಂದ ಕೂಚನೂರು, ತಾಪಂ ಇಒ ಹರೀಶ್, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಹಾಜರಿದ್ದರು.