ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನ ಕಾರ್ಯಕ್ರಮಕ್ಕ ನಗರಸಭಾ ಅಧ್ಯಕ್ಷ ಎಸ್. ಶರವಣ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕೇಂದ್ರದ ಅತ್ಯಂತ ಉತ್ತಮ ಯೋಜನೆಗಳಲ್ಲಿ ಕ್ಷಯಮುಕ್ತ ಭಾರತದ ಈ ಯೋಜನೆ ಸ್ವಾಗತಾರ್ಹವಾದುದು. ಹುಣಸೂರು ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ಷಯರೋಗ ಪೀಡಿತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದರೂ ಇನ್ನೂ ಜೀವಂತವಿದೆ. ಕ್ಷಯರೋಗಿಗಳ ಸುತ್ತಮುತ್ತಲ ಜನರ ಮನಸಿಲ್ಲಿನ ಕೆಲ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವುದು ಮುಖ್ಯವಾಗಿದೆ. ನಗರಸಭೆಯಿಂದ ಅಭಿಯಾನ ಯಶಸ್ವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳ ಪೈಕಿ ಭಾರತ 2025ರ ವೇಳೆಗೆ ಕ್ಷಯ ಮುಕ್ತ ದೇಶವಾಗಬೇಕೆನ್ನುವ ಗುರಿಯೊಂದಿಗೆ 100 ದಿನಗಳ ಅಭಿಯಾನ ಕಾರ್ಯಕ್ರಮ ರೂಪಿಸಿದೆ. ಡಿ.7ರಂದು ದೇಶಾದ್ಯಂತ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ 99 ದಿನಗಳ ಕಾಲ (2025 ರ ಮಾ. 24, 2025) ಯಾವ ಯಾವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕೆಂಬ ಕುರಿತು ಕಾರ್ಯಚಟುವಟಿಕೆ ಪಟ್ಟಿಯನ್ನೇ ಸರ್ಕಾರ ಒದಗಿಸಿದೆ. ಅಭಿಯಾನದಲ್ಲಿ ಜನಪ್ರತಿನಿಧಿಗಳನ್ನು, ಮಾಧ್ಯಮದವರನ್ನು, ವಿವಿಧ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರ ಒಳಗೊಳ್ಳುವಿಕೆಯ ಮೂಲಕ ಅರಿವು ಮೂಡಿಸುವ ಕುರಿತು ಮಾಹಿತಿ ಒದಗಿಸಲಾಗಿದೆ. ಜನನಿಬಿಡ ಬಡಾವಣೆಗಳ, ಸ್ಲಂಗಳು, ಹಾಡಿಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಕೀರ್ತಿಕುಮಾರ್ ಮಾತನಾಡಿ, ಅಭಿಯಾನವು ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ. ಮೊದಲನೆಯದಾಗಿ ಅರಿವು ನೀಡುವ ಮೂಲಕ ಕ್ಷಯರೋಗ ಪತ್ತೆ ಕಾರ್ಯದ ಸಂಖ್ಯೆ ಹೆಚ್ಚಿಸುವುದು, ಎರಡನೆಯದಾಗಿ ಶೀಘ್ರವಾಗಿ ರೋಗ ಗುರುತಿಸುವ, ಚಿಕಿತ್ಸೆ ನೀಡು ಮುಂತಾದ ಕ್ರಮಗಳಿಂದ ಕ್ಷಯದಿಂದ ಮೃತರಾಗುವವರ ಸಂಖ್ಯೆಯನ್ನು ಕಡಿಮೆಮಾಡುವುದು ಹಾಗೂ ಮೂರನೆಯದಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಬಲಗೊಳಿಸುವ ಮೂಲಕ ಹೊಸ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸುವುದಾಗಿದೆ ಎಂದರು.
ಜಿಲ್ಲಾ ಶುಶ್ರೂಶಕ ಅಧಿಕಾರಿ ಹೇಮಲತಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಕ ಹನುಮಂತು, ಆಶಾ ಕಾರ್ಯಕರ್ತೆಯರು ಇದ್ದರು.