ಸಾರಾಂಶ
ಪಾಲಕರ ಪರಭಾಷಾ ವ್ಯಾಮೋಹದಿಂದಾಗಿ ಮಕ್ಕಳಿಗೆ ಕನ್ನಡ ಭಾಷೆಯ ಬುನಾದಿ ಸಿಗುತ್ತಿಲ್ಲ ಎಂದು ನಿವೃತ್ತ ನ್ಯಾಯಾಧೀಶ ಶ್ರೀಧರ್‌ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಾಲಕರಿಗಿರುವ ಅನ್ಯ ಭಾಷೆಗಳ ಮೇಲಿನ ಅಗತ್ಯಕ್ಕಿಂತ ಹೆಚ್ಚಿನ ಪ್ರೀತಿಯಿಂದಾಗಿ ಮಕ್ಕಳಿಗೆ ಬಾಲ್ಯದ ಶಿಕ್ಷಣದಲ್ಲಿ ಕನ್ನಡದ ಬುನಾದಿ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ನಿವೃತ್ತ ಮುಖ್ಯ ನ್ಯಾಯಾಧೀಶ ಕೆ.ಶ್ರೀಧರ್ ರಾವ್, ಪೋಷಕರು ಮಾತೃಭಾಷೆ ಬೆಳೆಸುವ ಕಾಯಕ ಮಾಡಬೇಕು ಎಂದು ಕರೆ ನೀಡಿದರು.ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕನ್ನಡ ಭಾಷೆ ಉಳಿಸಿ ಬೆಳೆಸಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮರೆಯುತ್ತಿದ್ದೇವೆ. ಪೋಷಕರಿಗೆ ಕನ್ನಡ ಭಾಷೆ ಮೇಲಿನ ಪ್ರೀತಿ ಕಡಿಮೆ ಆಗುತ್ತಿರುವುದೇ ಇದಕ್ಕೆ ನಿದರ್ಶನ. ಮಗು ಮಾತನಾಡಲು ಆರಂಭಿಸುತ್ತಿದ್ದಂತೆ ಪೋಷಕರು ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದಾರೆ. ಹೀಗಾಗಿ ಮಕ್ಕಳು ಸಹ ಕನ್ನಡದ ಬದಲಿಗೆ ಇಂಗ್ಲಿಷ್ ಮಾತನಾಡುತ್ತಿದ್ದಾರೆ. ಮಕ್ಕಳು ಕನ್ನಡ ಕಲಿಕೆಯಿಂದ ದೂರವಾಗುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.ಕನ್ನಡ ರಾಜ್ಯೋತ್ಸವದ ಕುರಿತು ಡಾ। ವಸುಂಧರಾ ಕವಲಿ ಫಿಲಿಯೋಜಾ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ। ಮಹೇಶ್ ಜೋಶಿ ಪ್ರಸ್ತಾವಿಕ ಮಾತನಾಡಿದರು. ಕಸಾಪದ ನೀಲಾವರ ಸುರೇಂದ್ರ ಶೆಟ್ಟಿ ಇದ್ದರು.ಕನ್ನಡ ಕಾಯಕ ದತ್ತಿ ಪ್ರಶಸ್ತಿ ಪ್ರದಾನ
ಕನ್ನಡ ಹೋರಾಟಗಾರರಾದ ಗೋಮೂರ್ತಿ ಯಾದವ್, ಜಿ.ಬಾಲಾಜಿ, ರಂಗಕರ್ಮಿ ಕೆ.ರೇವಣ್ಣ, ಕೃಷ್ಣಮೂರ್ತಿ ಕವತ್ತಾರ್, ಸಾಹಿತಿ ಡಾ। ಮೀರಾಸಾಬಿಹಳ್ಳಿ ಶಿವಣ್ಣ, ಇತಿಹಾಸ ತಜ್ಞ ಡಾ। ಕೃಷ್ಣ ಕೆ.ಕುಲಕರ್ಣಿ ಅವರಿಗೆ ಕನ್ನಡ ಕಾಯಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದತ್ತಿ ಪ್ರಶಸ್ತಿಗಳು:
ಡಾ। ಟಿ.ವಿ.ವೆಂಕಟಾಚಾಲ ಶಾಸ್ತ್ರಿ ವಿದ್ವತ್ ದತ್ತಿ ಪ್ರಶಸ್ತಿಯನ್ನು ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಪಿ.ಶ್ರೀಕೃಷ್ಣ ಭಟ್, ಶ್ರೀಮತಿ ಟಿ.ಗಿರಿಜಾ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಅನುವಾದಕಿ ಡಾ। ವನಮಾಲಾ ವಿಶ್ವಾನಾಥ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ ದತ್ತಿ ಪ್ರಶಸ್ತಿ ರಂಗಭೂಮಿ ಕಲಾವಿದ ಬಸವರಾಜ ಚೆನ್ನವೀರಪ್ಪ ಬೆಂಗೇರಿ, ಶ್ರೀ ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಮದುವಟ್ಟು ದತ್ತಿ ಪ್ರಶಸ್ತಿ ಗಾಂಧಿವಾದಿ ಎಚ್.ಹನುಮಂತಪ್ಪ ಅವರಿಗೆ ಪ್ರದಾನ ಮಾಡಲಾಯಿತು.