ನಗರಸಭೆ ಉಪಚುನಾವಣೆಯಲ್ಲಿ ಶೇ. 65 ಮತದಾನ

| Published : Nov 24 2024, 01:49 AM IST

ಸಾರಾಂಶ

ಸ್ಥಳೀಯ ನಗರಸಭೆಯ ೮ ಮತ್ತು ೧೧ನೇ ವಾರ್ಡ್ ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ಉಪ ಚುನಾವಣೆ ಜರುಗಿತು. 8ನೇ ವಾರ್ಡಿನಲ್ಲಿ ಶೇ.65.96, 11ನೇ ವಾರ್ಡಿನಲ್ಲಿ ಶೇ 65.04 ಮತದಾನ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಸ್ಥಳೀಯ ನಗರಸಭೆಯ ೮ ಮತ್ತು ೧೧ನೇ ವಾರ್ಡ್ ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ಉಪ ಚುನಾವಣೆ ಜರುಗಿತು. 8ನೇ ವಾರ್ಡಿನಲ್ಲಿ ಶೇ.65.96, 11ನೇ ವಾರ್ಡಿನಲ್ಲಿ ಶೇ 65.04 ಮತದಾನ ದಾಖಲಾಗಿದೆ.

ವಾರ್ಡ್ ೮ರಲ್ಲಿ ೭೦೬ ಪುರುಷ ಹಾಗೂ ೭೦೧ ಮಹಿಳಾ ಮತದಾರರು ಸೇರಿ ಒಟ್ಟು ೧೪೦೭ ಮತದಾರರಿದ್ದು, ಅದರಲ್ಲಿ 928 ಮತದಾರರು ಮತ ಚಲಾಯಿಸಿದ್ದಾರೆ. ಮತದಾನವು ಬ್ರಹ್ಮನವಾಡಿ ಶಾಲೆಯಲ್ಲಿ ಜರುಗಿತು.

ವಾರ್ಡ್ ೧೧ರಲ್ಲಿ ೫೩೪ ಪುರುಷ ಹಾಗು ೫೩೩ ಮಹಿಳಾ ಮತದಾರರು ಸೇರಿ ಒಟ್ಟು ೧೦೮೭ ಮತದಾರರಿದ್ದು, ಅದರಲ್ಲಿ 707 ಮತದಾರರು ಮತದಾನ ಮಾಡಿದ್ದಾರೆ. ಸಿಪಿಸಿ ಶಾಲೆಯಲ್ಲಿ ಮತದಾನ ಜರುಗಿತು.

ಬೆಳಗ್ಗೆಯಿಂದ ವಾರ್ಡಿನ ಮತದಾರರು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. 26ರಂದು ಮತ ಎಣಿಕೆ ನಡೆಯಲಿದೆ.

ಶಾಂತಿಯುತ ಮತದಾನ:

ಕೊಪ್ಪಳ ನಗರಸಭೆಯ ಎರಡೂ ವಾರ್ಡುಗಳಲ್ಲಿ ಬೆಳಗ್ಗೆಯಿಂದ ಆರಂಭವಾದ ಮತದಾನ ಸಂಜೆಯವರೆಗೂ ಶಾಂತಿಯುತವಾಗಿ ನಡೆಯಿತು. ಮತಗಟ್ಟೆಯ ಹೊರಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತದಾರರ ಮತ ಸೆಳೆಯುವಲ್ಲಿ ತಲ್ಲೀನರಾಗಿದ್ದರು. ಮಧ್ಯಾಹ್ನ ಬಿರುಸಿನಿಂದ ಮತದಾನ ನಡೆಯಿತು. ಪೊಲೀಸ್ ಇಲಾಖೆಯು ಎರಡೂ ವಾರ್ಡ್‌ಗಳ ಮತದಾನಕ್ಕೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ನಗರಸಭೆಯ ೮ನೇ ವಾರ್ಡಿನಲ್ಲಿ ಈ ಹಿಂದೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಸುನಿತಾ ಗಾಳಿ ಸರ್ಕಾರಿ ನೌಕರಿ ದೊರೆತ ಹಿನ್ನೆಲೆಯಲ್ಲಿ ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ಇನ್ನು ೧೧ನೇ ವಾರ್ಡಿಗೆ ಬಿಜೆಪಿಯಿಂದ ಗೆದ್ದಿದ್ದ ರಾಜಶೇಖರ ಆಡೂರು ಕಳೆದ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದರಿಂದ ಅವರೂ ತಮ್ಮ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಇದರಿಂದಾಗಿ ಎರಡು ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿ

ಚುನಾವಣೆ ರಂಗೇರಿತ್ತು.

೮ನೇ ವಾರ್ಡಿಗೆ ಬಿಸಿಎಂ ಅ ಮಹಿಳೆ ಮೀಸಲಾಗಿದ್ದರಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರೇಣುಕಾ ಪೂಜಾರ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಕವಿತಾ ಗಾಳಿ ಸ್ಪರ್ಧೆ ಮಾಡಿದ್ದರು. ಇನ್ನು ೧೧ನೇ ವಾರ್ಡು ಬಿಸಿಎಂ

ಅ ಮೀಸಲಾತಿಯಿದ್ದ ಕಾರಣ ಕಾಂಗ್ರೆಸ್‌ನಿಂದ ಮತ್ತೆ ರಾಜಶೇಖರ ಆಡೂರು ಸ್ಪರ್ಧೆ ಮಾಡಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಚನ್ನಬಸಪ್ಪ ಗಾಳಿ ಕಣದಲ್ಲಿದ್ದರು.

ಕಳೆದೊಂದು ತಿಂಗಳಿಂದ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದ ಎರಡೂ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೂ ತೆರಳಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದರು. ತಮ್ಮ ವಾರ್ಡುಗಳಲ್ಲಿ

ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖ ನಾಯಕರೂ ಸಹ ಪ್ರಚಾರ ನಡೆಸಿ ಮತ ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದರು.