ಮಕ್ಕಳ ಪ್ರತಿಭೆಗೆ ಮಕ್ಕಳ ದಸರಾ ಸೂಕ್ತ ವೇದಿಕೆ

| Published : Sep 24 2025, 01:00 AM IST

ಸಾರಾಂಶ

9ನೇ ತರಗತಿಯ ಆರ್‌. ರಕ್ಷಿತಾ - ಯುವ ವಿಜ್ಞಾನಿ, 2ನೇ ತರಗತಿಯ ಚಿರಸ್ವಿ ಬಾಲಸುಬ್ರಹ್ಮಣ್ಯನ್- ವಿಶೇಷ ಪ್ರತಿಭೆ, 9ನೇ ತರಗತಿಯ ಅರ್ಪಿತ ಕಲಾಗುಡಿ- ಕ್ರೀಡಾ ಕ್ಷೇತ್ರ, 10ನೇ ತರಗತಿಯ ಪ್ರಥಮ್ ಗೌಡ- ಕಲಾ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮಧು ಬಂಗಾರಪ್ಪ ಸನ್ಮಾನಿಸಿದರು.

ಎಲ್.ಎಸ್. ಶ್ರೀಕಾಂತ್‌

ಕನ್ನಡಪ್ರಭ ವಾರ್ತೆ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಲಾಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಆಯೋಜಿಸಿದ್ದ ಮಕ್ಕಳ ದಸರಾವನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ, ಮಕ್ಕಳೊಂದಿಗೆ ಸಂವಿಧಾನ ಪೀಠಿಕೆ ಹೇಳಿದ್ದು ಬಹಳ ಸಂತೋಷವಾಗಿದೆ. ಇದು ಬಿ.ಆರ್‌. ಅಂಬೇಡ್ಕರ್‌ಅವರಿಗೆ ಗೌರವ ಕೊಡುವಂತಾಗಿದೆ ಎಂದರು.

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಬೆಳಕಿಗೆ ತರಲು ಪ್ರೋತ್ಸಾಹಿಸಲು ಮಕ್ಕಳ ದಸರಾ ಸೂಕ್ತ ವೇದಿಕೆಯಾಗಿದೆ. ಮಕ್ಕಳ ದಸರಾದ ಪರಿಕಲ್ಪನೆ ಮತ್ತು ಅದರ ಪರಿಚಯವು ಶ್ಲಾಘನೀಯವಾಗಿದೆ ಎಂದರು.

ಸರ್ಕಾರಿ ಶಾಲಾ ಮಕ್ಕಳಿಗೆ ಎಲ್ಲವನ್ನೂ ಸರ್ಕಾರ ಉಚಿತವಾಗಿ ನೀಡುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳನ್ನು ನಂಬಬೇಕು. ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಬೇಕು ಎಂದರು.

ನಮ್ಮ ಜೀವನಕ್ಕೆ ಒಳ್ಳೆಯ ದಿಕ್ಕು ತೋರಿಸಲು ಗುರುಗಳಿಂದ ಮಾತ್ರ ಸಾಧ್ಯ. ಅಂತಹ ಕೆಲಸವನ್ನು ಸರ್ಕಾರಿ ಶಾಲಾ ಶಿಕ್ಷಕರು ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಊಟ ನೀಡುವುದು ದೇವರಿಗೆ ನೈವೇದ್ಯ ಇಟ್ಟಂತೆ ಎಂದು ಭಾವಿಸಿದ್ದೇನೆ. ಉತ್ತಮ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲಿ ಮಾತ್ರ ಎಂದು ತಿಳಿಸಿದರು.

ಮಕ್ಕಳು ಚೆನ್ನಾಗಿ ಓದಬೇಕು. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ದೇಶದ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ, ಶಿಕ್ಷಣದಲ್ಲಿ ಕನ್ನಡ ಉಳಿಸಲು ಮುಂದಿನ ಸಾಲಿನಿಂದ ಕನ್ನಡವನ್ನು ಕಡ್ಡಾಯ ಮಾಡಲಾಗುವುದು ಎಂದು ಅವರು ಹೇಳಿದರು.

ಟಿಇಟಿ ರದ್ದು ಮಾಡಲು ಮನವಿ:

ಸಚಿವರು ವೇದಿಕೆ ಆಗಮಿಸುವ ವೇಳೆ ಕೆಲವು ಶಿಕ್ಷಕಿಯರು ಟಿಇಟಿ ಮಾಡದೆ, ರದ್ದುಗೊಳಿಸುವಂತೆ ಮನವಿ ಮಾಡಿದಾಗ, ಇದು ನಾವು ಕಾನೂನು ತಂದಿದ್ದಲ್ಲ, ಈಗ ಇದು ಸುಪ್ರೀಂ ಕೋರ್ಟ್‌ ಮಾಡಿದೆ, ಸುಪ್ರೀಂ ಕೋರ್ಟ್‌ ಏನು ತೀರ್ಮಾನ ಕೈಗೊಳ್ಳತ್ತದೋ ಆದರೆ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ನೀವು ಗ್ರಂಥಾಲಯದ ಬಳಿ ಇರಬೇಕು. ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳ ಗೋಸ್ಕರ ತೆಗೆದುಕೊಂಡ ಕಾರ್ಯಕ್ರಮವನ್ನು ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಮಾತನಾಡಿ, ನಾವು ಸಾಧನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ದಸರಾದಲ್ಲಿ ಹಲವಾರು ರೀತಿಯ ದಸರಾಗಳನ್ನು ಆಯೋಜಿಸಿದ್ದಾರೆ. ಅದರಲ್ಲಿ ಮಕ್ಕಳ ದಸರಾ ಕೂಡ ಒಂದಾಗಿದೆ, ಹಾಗೆ ಮಕ್ಕಳಿಗೂ ಸಹ ಅದೇ ರೀತಿಯಾದಂತಹ ಪ್ರಾಮುಖ್ಯತೆ ಕೊಟ್ಟರೆ ಅವರಿಗೂ ಆತ್ಮಸ್ಥೈರ್ಯ ಸಿಗುವಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲಿಗೆ ವೀರೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ, ಅದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳುವಂತೆ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಮೊಬೈಲ್‌ ಬಿಡಿ, ಪುಸ್ತಕ ಹಿಡಿ:

ನಂತರ ಸಚಿವರು ಮತ್ತೆ ಎದ್ದು ಬಂದು ಮಾತನಾಡಿ, ಮನೆಗಳಲ್ಲಿ ಪೋಷಕರು ಮಕ್ಕಳ ಕಡೆ ಗಮನ ಹರಿಸಬೇಕು ಮತ್ತು ಮಕ್ಕಳಿಗೆ ಮೊಬೈಲ್‌ ನೀಡದಂತೆ ತಿಳಿ ಹೇಳಿದರು. ಇದೇ ಮಕ್ಕಳಲ್ಲಿ ಮೂರು ಬಾರಿ ಮೊಬೈಲ್‌ ಬಿಡಿ, ಪುಸ್ತಕ ಹಿಡಿ ಎಂದು ಹೇಳಿಸಿದರು.

ಪೋಷಕರು ಮಕ್ಕಳನ್ನು ಯಾವ ರೀತಿಯಾಗಿ ಓದಿಸಬೇಕು ಹಾಗೂ ಅವರಿಗೆ ಯಾವ ರೀತಿ ಸಂಸ್ಕೃತಿಯನ್ನು ತಿಳಿಸಿ ಕೊಡಬೇಕಾಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.

ದಸರಾ ಸಂಭ್ರಮದಲ್ಲಿ ಮಕ್ಕಳು ವಿವಿಧ ಕಲಾಪ್ರಾಕಾರಗಳ ನೃತ್ಯ ರೂಪಕ ಪ್ರದರ್ಶಿಸಿದರು. ನಾನಾ ಬಗೆಯ ವೇಷಭೂಷಣ ಧರಿಸಿ ಗಮನಸೆಳೆದರು.

ನಾಲ್ವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

9ನೇ ತರಗತಿಯ ಆರ್‌. ರಕ್ಷಿತಾ - ಯುವ ವಿಜ್ಞಾನಿ, 2ನೇ ತರಗತಿಯ ಚಿರಸ್ವಿ ಬಾಲಸುಬ್ರಹ್ಮಣ್ಯನ್- ವಿಶೇಷ ಪ್ರತಿಭೆ, 9ನೇ ತರಗತಿಯ ಅರ್ಪಿತ ಕಲಾಗುಡಿ- ಕ್ರೀಡಾ ಕ್ಷೇತ್ರ, 10ನೇ ತರಗತಿಯ ಪ್ರಥಮ್ ಗೌಡ- ಕಲಾ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ವಿದ್ಯಾರ್ಥಿಗಳಿಗೆ ಮಧು ಬಂಗಾರಪ್ಪ ಸನ್ಮಾನಿಸಿದರು.

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಹಾಗೂ ಉಪಕಾರ್ಯದರ್ಶಿ ಜಿಪಂ ಉಪ ವಿಶೇಷಾಧಿಕಾರಿ ಬಿ.ಎಂ. ಸವಿತಾ, ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಮತ್ತು ಸಹ ನಿರ್ದೇಶಕ ಕೆ.ಎಸ್‌. ಪ್ರಕಾಶ್, ಜಿಸಿಟಿಇ ಪ್ರಾಂಶುಪಾಲರು ಮತ್ತು ಸಹ ನಿರ್ದೇಶಕಿ ಕೆ. ರಾಜಲಕ್ಷ್ಮಿ, ಡಯಟ್ ಪ್ರಾಂಶುಪಾಲರು ಮತ್ತು ಉಪ ನಿರ್ದೇಶಕರಾದ ಸಿ.ಆರ್. ನಾಗರಾಜಯ್ಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಇದ್ದರು.