ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಾಗದೆ, ಸುಸಂಸ್ಕೃತ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಕ್ಕಳು ಕೇವಲ ಅಂಕ ಗಳಿಸುವ ಯಂತ್ರಗಳಾಗದೆ, ಸುಸಂಸ್ಕೃತ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಕುಂಚಶ್ರೀ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೫ ನೇ ಸಂಸ್ಕಾರ ಶಿಬಿರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸದಿದ್ದರೂ ಪರವಾಗಿಲ್ಲ, ಆದರೆ ತಂದೆ-ತಾಯಿಯರು ಹಾಗೂ ಗುರುಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳು ಅಳವಡಿಸಿ ಕೊಳ್ಳಬೇಕು. ಮೌಲ್ಯಾಧಾರಿತ ಶಿಕ್ಷಣವೇ ಜೀವನದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೇಳಿದರು.
ಪೋಷಕರು ಮಕ್ಕಳನ್ನು ಕೇವಲ ಅಂಕಗಳತ್ತ ಪ್ರೇರೇಪಿಸುತ್ತಿರುವುದು ವಿಷಾದನೀಯ. ಇದರಿಂದ ಮಕ್ಕಳ ಆರೋಗ್ಯ ಹಾಗೂ ಮನಸ್ಥಿತಿಯಲ್ಲಿ ಬದಲಾವಣೆ ಕಾಣಿಸುತ್ತಿದೆ, ಹತ್ತು ದಿನಗಳ ಸಂಸ್ಕಾರ ಶಿಬಿರದಲ್ಲಿ ಮಕ್ಕಳು ನಿಯಮಿತ ಆಹಾರ ಸೇವನೆ, ಒತ್ತಡರಹಿತ ಜೀವನ ಮತ್ತು ಶಿಸ್ತಿನೊಂದಿಗೆ ಉತ್ತಮ ಶಿಬಿರಾರ್ಥಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು.ಸಂಸ್ಕಾರ ಶಿಬಿರದ ಯಶಸ್ಸಿಗೆ ದಾನಿಗಳೇ ಪ್ರಮುಖ ಆಧಾರವಾಗಿದ್ದು, ಜಾತಿ-ಧರ್ಮ-ಲಿಂಗ ಬೇಧವಿಲ್ಲದೆ ಎಲ್ಲರೂ ಮಠದ ಭಕ್ತರಾಗಿರುವುದು ವಿಶೇಷ. ಆದಿಚುಂಚನಗಿರಿ ಬಾಲಗಂಗಾಧರನಾಥ ಶ್ರೀಗಳು ನೀಡಿದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದೇವೆ ಎಂದು ಹೇಳಿದರು.ಮೇಲುಕೋಟೆಯ ಭಗವತ್ ರಾಮಾನುಜ ಸಂಶೋಧನಾ ಸಂಸ್ಥೆಯ ಕುಲಸಚಿವ ಸಿ. ಕುಮಾರ್ ಮಾತನಾಡಿ, ಹಿಂದೂ ಸಮಾಜದಲ್ಲಿ ಶಿಕ್ಷಣವಂತರ ಸಂಖ್ಯೆ ಹೆಚ್ಚುತ್ತಿರುವುದಾದರೂ ಸಂಸ್ಕಾರವಂತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಕುಂಚಿಟಿಗ ಮಹಾಸಂಸ್ಥಾನ ಮಠವು ಸನಾತನ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಸಂಸ್ಕಾರ ಶಿಬಿರ ಆಯೋಜಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮಠದ ದಾನಿಗಳಾದ ಡಾ.ನವೀನ್ ದೇವರಾಜಯ್ಯ ಮಾತನಾಡಿ, ವಿದ್ಯೆ ಕೇವಲ ಜ್ಞಾನವನ್ನ? ಅಲ್ಲ, ಜೀವನೋಪಾಯದ ಮಾರ್ಗವನ್ನೂ ನೀಡುತ್ತದೆ. ವಿದ್ಯಾದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ನಮ್ಮ ದೇಶ, ಭಾ? ಹಾಗೂ ಸಂಸ್ಕೃತಿಯನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಮಕ್ಕಳು ಮೊದಲು ಮನಸ್ಸಿನ ನಿಯಂತ್ರಣ ಕಲಿಯಬೇಕು. ಚಂಚಲತೆಯಿಂದ ದೂರವಾಗಿ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯೆ ವಿನಯವನ್ನು ಕಲಿಸುತ್ತದೆ ಎಂದು ತಿಳಿಸಿದರು.ಕುಂಚಿಟಿಗ ಮಹಾಸಂಸ್ಥಾನ ಮಠದ ಮಾಹಿತಿಗಾಗಿ ವೆಬ್ಸೈಟ್ ಅನ್ನು ಅಧಿಕೃತವಾಗಿ ಹನುಮಂತನಾಥ ಶ್ರೀಗಳು ಗುರುವಾರ ಚಾಲನೆ ನೀಡಿದರು. ಶಿಬಿರ ೧೦ ದಿನಗಳ ಕಾಲ ನಡೆಯಲಿದೆ. ೫೦೦ಕ್ಕೂ ಹೆಚ್ಚು ಮಕ್ಕಳು ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗೃಹ ಸಚಿವರ ವಿಶೇಷ ಅಧಿಕಾರಿ ಡಾ. ಡಾ.ಕೆ. ನಾಗಣ್ಣ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಅನಂತರಾಜು, ಸದ್ವಿದ್ಯಾ ಸಂಸ್ಥಾಪಕ ಶಾಲೆಯ ಆಡಳಿತಾಧಿಕಾರಿ ಡಾ. ನಂಜುಂಡಯ್ಯ, ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕುಮಾರಸ್ವಾಮಿ ಮುಖಂಡರಾದ ನರೇಂದ್ರಬಾಬು, ನೇತಾಜಿ ಶ್ರೀಧರ, ಬೈಯಪ್ಪನಹಳ್ಳಿ, ನಾಗರಾಜ,ಲೋಕೇಶ್,ಡಾ. ಭೋಗಣ್ಣ ಸೇರಿದಂತೆ ಇತರರು ಇದ್ದರು.