ಚಿಣ್ಣರ ಜಾಣರ ಜಗುಲಿ ವಿನೂತನ ಮಕ್ಕಳ ಹರಟೆ ಕಾರ್ಯಕ್ರಮ

| Published : Sep 11 2024, 01:06 AM IST

ಚಿಣ್ಣರ ಜಾಣರ ಜಗುಲಿ ವಿನೂತನ ಮಕ್ಕಳ ಹರಟೆ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸುಳ್ಳುಗಾರರು ಎಂದು ಮತ್ತೊಂದು ತಂಡ ವಾದಿಸಿದರೆ, ಅತಿ ಹೆಚ್ಚು ಸುಳ್ಳು ಹೇಳುವುದು ಮಹಿಳೆಯರು ಎಂದು ವಿದ್ಯಾರ್ಥಿಗಳ ಒಂದು ತಂಡ ವಾದ ಮಾಡಿದರು. ಈ ವೇಳೆ ಮಕ್ಕಳ ಚರ್ಚೆಯನ್ನು ವೀಕ್ಷಿಸಿದ ವಿದ್ಯಾರ್ಥಿಗಳು, ಪೋಷಕರು ಚಪ್ಪಾಳೆತಟ್ಟಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಪ್ರಯುಕ್ತ ಭಾನುವಾರ ಗುರುವಂದನಾ ಹಾಗೂ ಚಿಣ್ಣರ ಜಾಣರ ಜಗುಲಿ ಎಂಬ ವಿನೂತನ ಮಕ್ಕಳ ಹರಟೆ ಕಾರ್ಯಕ್ರಮ ನಡೆಯಿತು.

ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ನೇತೃತ್ವದಲ್ಲಿ ಹರಟೆ ಖ್ಯಾತಿಯ ಇಂದುಮತಿ ಸಾಲಿಮಠ ಸಾರಥ್ಯದಲ್ಲಿ ನಡೆದ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಗಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳು ಜೀವನದಲ್ಲಿ ಮಹಿಳೆಯರು ಹೆಚ್ಚು ಸುಳ್ಳು ಹೇಳುತ್ತಾರೋ ಅಥವಾ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರೋ ಎಂಬ ವಿಷಯ ಕುರಿತಂತೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಚರ್ಚಿಸಿದರು.

ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸುಳ್ಳುಗಾರರು ಎಂದು ಮತ್ತೊಂದು ತಂಡ ವಾದಿಸಿದರೆ, ಅತಿ ಹೆಚ್ಚು ಸುಳ್ಳು ಹೇಳುವುದು ಮಹಿಳೆಯರು ಎಂದು ವಿದ್ಯಾರ್ಥಿಗಳ ಒಂದು ತಂಡ ವಾದ ಮಾಡಿದರು. ಈ ವೇಳೆ ಮಕ್ಕಳ ಚರ್ಚೆಯನ್ನು ವೀಕ್ಷಿಸಿದ ವಿದ್ಯಾರ್ಥಿಗಳು, ಪೋಷಕರು ಚಪ್ಪಾಳೆತಟ್ಟಿ ಸಂಭ್ರಮಿಸಿದರು.

ಗ್ಯಾರಂಟಿ ಯೋಜನೆಗಳ ಲೇವಡಿ:

ಸರ್ಕಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಂಡಸರು ಚುನಾವಣೆಗಿಂತ ಮುಂಚೆ ಕೊಟ್ಟ ಭರವಸೆ ಈಡೇರಿಸುವುದಿಲ್ಲ. ಸರ್ಕಾರ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಆದರೆ. ಅದರಲ್ಲಿ ಬಹುತೇಕ ಗ್ಯಾರಂಟಿಗಳು ಅರ್ಧಕ್ಕೆ ನಿಂತಿದೆ ಎಂದು ಮಹಿಳೆಯರ ಪರ ವಾದ ಮಾಡಿದ ತಂಡದ ಸದಸ್ಯರು, ಸರ್ಕಾರದ ಗ್ಯಾರಂಟಿಗಳನ್ನು ಲೇವಡಿ ಮಾಡಿದರು.

ಇದಕ್ಕೂ ಮುನ್ನ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆ ವಿದ್ಯಾರ್ಥಿಗಳು ತಮ್ಮ ಪಾಲಕರ ಪಾದ ತೊಳೆದು ಪೂಜೆ ಮಾಡುವ ಮೂಲಕ ಗುರುವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವಪ್ಪ, ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕ್ಯಾತನಹಳ್ಳಿ ಎಸ್.ದಯಾನಂದ್, ವೈ.ಪಿ.ಮಂಜು, ವೈ.ಜಿ.ರಘು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ನಿವೃತ್ತ ದೈಹಿಕ ಶಿಕ್ಷಕ ಸಿ.ಎಸ್.ಸುಬ್ಬೇಗೌಡ, ಬಿ.ಎಸ್.ಜಯರಾಮು, ಸೇರಿದಂತೆ ಹಲವರು ಭಾಗವಹಿಸಿದರು.