ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕುಲಾಂತರಿ ಆಹಾರ ವಿರೋಧಿ ಒಕ್ಕೂಟದಿಂದ ಸೆ. ೨೮, ೩೦, ಅ.೧ ಮತ್ತು ೨ ರಂದು ತುಮಕೂರು ಜಿಲ್ಲೆಯ ಗಾಂಧೀಜಿ ಸಹಜ ಬೇಸಾಯ ಆಶ್ರಮ, ದೊಡ್ಡಹೊಸೂರು ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ದೊಡ್ಡ ಹೊಸೂರು ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಸತ್ಯಾಗ್ರಹದ ಅಂಗವಾಗಿ ಸೆ. ೧೭ರಂದು ನಗರದಲ್ಲಿ ಜಿಲ್ಲ್ಲಾಡಳಿತ ಕಚೇರಿ ಆವರಣದಲ್ಲಿ, ಸಾಂಕೇತಿಕ ಪ್ರತಿಭಟನೆ ಮತ್ತು ಜಿಲ್ಲಾಧಿಕಾರಿ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡುವ ಮೂಲಕ ಸತ್ಯಾಗ್ರಹಕ್ಕೆ ನಮ್ಮ ಬೆಂಬಲ ವ್ಯಕ್ತಪಡಿಸಲಾಗುವುದು ಎಂದರು. ಜಿಲ್ಲೆಯ ರೈತ ಭಾಂಧವರು ದೊಡ್ಡ ಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸುವ ಮೂಲಕ ಕುಲಾಂತರಿ ಆಹಾರ (ಜಿಎಂ) ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರದಿಂದ ಬಹಿಷ್ಕರಿಸಬೇಕಾಗಿದೆ ಎಂದು ಮನವಿ ಮಾಡಿದರು.ನಮ್ಮ ದೇಶದ ಪಾರಂಪರಿಕ ಕೃಷಿ ಜ್ಞಾನ, ಹಿರಿಮೆ, ದೃಷ್ಟಿಕೋನ, ಆಯಾಮ ಬಹು ವಿಸ್ತಾರವಾದದ್ದು. ಇಂತಹ ಇತಿಹಾಸ ಹೊಂದಿರುವ ದೇಶಕ್ಕೆ "ಕುಲಾಂತರಿ ಆಹಾರವನ್ನು "ತರುವುದಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಪಿತೂರಿ ನಡೆಸುತ್ತಿವೆ. ಕುಲಾಂತರಿ ಆಹಾರಗಳ ಮೂಲಕ ಕೃಷಿ ವಿರೋಧಿ, ಸಮಾಜ ವಿರೋಧಿ, ಸಂಸ್ಕೃತಿ ವಿರೋಧಿ ಮತ್ತು ಪರಿಸರ ವಿರೋಧಿ ಕೃತ್ಯವನ್ನು ನೆಡಸಲು ಮುಂದಾಗಿವೆ ಎಂದು ಆರೋಪಿಸಿದರು.ಇದು ಜೈವಿಕ ವ್ಯವಸ್ಥೆಯ ಉಲ್ಲಂಘನೆ ಮಾತ್ರವಲ್ಲದೆ, ಮಾನವ ಹಕ್ಕುಗಳು, ಪರಿಸರದ ಹಕ್ಕುಗಳು, ಪಂಚಾಯತಿ ಹಕ್ಕುಗಳು ಮತ್ತು ನಮ್ಮ ರೈತರ ಸಾರ್ವಭೌಮತ್ವದ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಿ, ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿ ಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಭಾರತ ಸರ್ಕಾರದ ನಿರ್ಧಾರವನ್ನು ಖಂಡಿಸಬೇಕಾಗಿದೆ ಎಂದರು.ಸತ್ಯಾಗ್ರಹದಲ್ಲಿ ಭಾಗವಹಿಸಲು ನಮ್ಮ ಜಿಲ್ಲೆಯಿಂದ ನಾಲ್ಕು ಬಸ್‌ಗಳಲ್ಲಿ ಸೆ. ೩೦ರಂದು ಹೊರಡಲಿದ್ದು, ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಇತರೆ ಸಂಘ ಸಂಸ್ಥೆಗಳ ಮುಖಂಡರುಗಳೊಂದಿಗೆ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು. ಸಭೆಯಲ್ಲಿ ಸಾಹಿತಿ ಕೆ. ವೆಂಕಟರಾಜು, ಜೆ ಎಸ್ ಬಿ ಪ್ರತಿಷ್ಠಾ ನದ ಎಸ್. ಶಶಿಕುಮಾರ್, ಅರಕಲವಾಡಿ ನಾಗೇಂದ್ರ, ಚಂಗಡಿ ಕರಿಯಪ್ಪ, ಮಲ್ಲೇಶ, ಕಲ್ಪುರ ಮಹದೇವಸ್ವಾಮಿ, ಗುಂಡ್ಲುಪೇಟೆ ರಮೇಶ, ಶಿವಸ್ವಾಮಿ, ಶಿವಮಲ್ಲಪ್ಪ, ಯೋಗೇಶ ಇತರರು ಭಾಗವಹಿಸಿದ್ದರುಎಂಎನ್‌ಸಿ ಕಂಪನಿಯಿಂದ ನಮ್ಮತನ ಮಾಯ: ಅಂದು ಈಸ್ಟ್ ಇಂಡಿಯಾ ಕಂಪನಿ, ಇಂದು ಬಹುರಾಷ್ಟ್ರೀಯ ಕಂಪನಿ ಹೀಗೆ ಮುಂದುವರೆದರೆ, ನಮ್ಮ ಪಾರಂಪರಿಕ ಕೃಷಿ ಜ್ಞಾನ, ಹಳ್ಳಿ, ನಮ್ಮ ದನ, ಎಮ್ಮೆ, ಆಡು, ಕುರಿ, ಕೋಳಿ, ಅನ್ನ, ಕಾಳು-ಕಡ್ಡಿ, ಕೂಲಿ-ಕಾರ್ಮಿಕರು, ಅಂಗಡಿ-ಮುಂಗಟ್ಟು, ಇತ್ಯಾದಿಗಳು ಮಾಯವಾಗುತ್ತವೆ. ಅವರ ಕೃತಕ ಸರಕುಗಳು, ವಿಷಮಿಶ್ರಿತ ಆಹಾರ, ವಿಷಪೂರಿತ ನಾಶಕ, ಮನೆ ಮನೆಗೂ ಬಂದು ನಮ್ಮ ಹಳ್ಳಿ, ಆಹಾರಗಳನ್ನು ಹಾಳು ಮಾಡುತ್ತವೆ. ನಮ್ಮನ್ನು ನಮ್ಮ ಮಕ್ಕಳನ್ನು, ನಮ್ಮ ಸಮಾಜವನ್ನು ಹಿಂದೆಂದು ಕೇಳರಿಯದಂತಹ ರೋಗಗಳಿಗೆ ತಳ್ಳುತ್ತಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಕಿಡಿಕಾರಿದರು.ಎಲ್ಲರೂ ಒಟ್ಟುಗೂಡಿ, ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರಕ್ಕೆ ಕಾಲಿಡದಂತೆ ಬುಡಸಮೇತ ಕಿತ್ತೊಗೆಯಬೇಕಿದ್ದು, ಸೆಪ್ಟಂಬರ್ ೨೮, ೩೦ ಮತ್ತು ಅಕ್ಟೋಬರ್ ೧, ೨ ರಂದು ನಾಲ್ಕು ದಿನಗಳ ಕಾಲ ಗಾಂಧೀಜಿ ಸಹಜ ಬೇಸಾಯ ಆಶ್ರಮ, ದೊಡ್ಡಹೊಸೂರಿನಲ್ಲಿ ನಡೆಯುವ ದೊಡ್ಡಹೊಸೂರು ಸತ್ಯಾಗ್ರಹದಲ್ಲಿ ಭಾಗವಹಿಸಬೇಕು.
ಹೊನ್ನೂರು ಪ್ರಕಾಶ್ ಜಿಲ್ಲಾ ರೈತ ಸಂಘದ ಅಧ್ಯಕ್ಷ