ಮುಖ್ಯಮಂತ್ರಿ ಬದಲಾವಣೆ ಅಪ್ರಸ್ತುತ; ಲಾಡ್

| Published : Sep 11 2024, 01:06 AM IST

ಮುಖ್ಯಮಂತ್ರಿ ಬದಲಾವಣೆ ಅಪ್ರಸ್ತುತ; ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯವರಿಗೆ ಭವಿಷ್ಯ ಹೇಳುವುದೇ ಕಾಯಕವಾಗಿದೆ. ಈಗ ದೀಪಾವಳಿ ಒಳಗೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಸಚಿವ ಸಂತೋಷ ಲಾಡ್‌ ಕಿಡಿಕಾರಿದರು.

ಹುಬ್ಬಳ್ಳಿ:

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಪ್ರಸ್ತುತ, ಯಾರಾದರೂ ಈ ಕುರಿತು ಮಾತನಾಡಿದರೆ, ಅದು ಅವರ ವೈಯಕ್ತಿಕ ಹೇಳಿಕೆಯಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಈಗಾಗಲೇ ಈ ಕುರಿತಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಹಾಗೂ ಸುರ್ಜೆವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ. ಹೈಕಮಾಂಡ್‌ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲವಿದೆ. ಆದರೆ, ಕೆಲವು ನಾಯಕರು ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು ಎಂದರು.

ಬರೀ ಭವಿಷ್ಯ ನುಡಿಯುತ್ತಾರೆ:

ಬಿಜೆಪಿಯವರಿಗೆ ಭವಿಷ್ಯ ಹೇಳುವುದೇ ಕಾಯಕವಾಗಿದೆ. ಈಗ ದೀಪಾವಳಿ ಒಳಗೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ನಮ್ಮ ಸರ್ಕಾರ 5 ವರ್ಷ ಸುಭದ್ರವಾಗಿರಲಿದೆ. ನಮ್ಮ ಬಳಿ 136 ಶಾಸಕರಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ. ಹಾಗೇನಾದರೂ ಆದರೆ ಕೇಂದ್ರ ಸರ್ಕಾರಕ್ಕೆ ತೊಂದರೆ ಆಗಬಹುದು. ಏಕೆಂದರೆ ಅವರ ಹತ್ತಿರ ಸಂಪೂರ್ಣ ಬಹುಮತವಿಲ್ಲ ಎಂದು ಲಾಡ್ ಟಾಂಗ್ ನೀಡಿದರು.

ಕೇಂದ್ರದಲ್ಲಿ ಸರ್ಕಾರ ಇರುತ್ತದೆಯೇ?

ಜಮ್ಮು-ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಸೋಲುವ ಸಾಧ್ಯತೆ ಇದೆ. ಬಿಹಾರ ಕೂಡಾ ಸೋಲಾಗಬಹುದು. ಮುಂದೆ ನಾಲ್ಕು ರಾಜ್ಯಗಳ ಚುನಾವಣೆಯಾದರೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುತ್ತಾ? ಎಂಬ ಪ್ರಶ್ನೆಯನ್ನು ಅವರ ನಾಯಕರನ್ನು ಕೇಳಬೇಕು ಎಂದು ಕುಟುಕಿದರು.

ಜೋಶಿ ಕೈವಾಡ:

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪೋಟೊಗಳು ವೈರಲ್ ಆದ ವಿಚಾರದಲ್ಲಿ ಆರೋಪ ಮಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರದೇ ಕೈವಾಡ ಇರಬಹುದು. ಇಷ್ಟು ನಿಖರವಾಗಿ ಯಾರು ಪೋಟೋ ಬಿಟ್ಟಿದ್ದಾರೆ ಎಂದು ಹೇಳುತ್ತಾರೆ, ಅಂದರೆ, ಅವರಿಗೆ ಸಂಪೂರ್ಣ ಮಾಹಿತಿ ಇರಬೇಕು ಶಂಕೆ ವ್ಯಕ್ತಪಡಿಸಿದರು.

ಮುಡಾ, ವಾಲ್ಮೀಕಿ ಹಗರಣ ಮರೆಮಾಚುವ ಪ್ರಶ್ನೆಯೇ ಇಲ್ಲ. ಮುಡಾ ಹಗರಣದ ಬಗ್ಗೆ ಪ್ರಹ್ಲಾದ ಜೋಶಿ ಅವರಿಗೆ ಪ್ರಶ್ನೆ ಮಾಡಿ ಆಗ ಸತ್ಯ ಗೊತ್ತಾಗಲಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಏಕೆ ಪ್ರಾಸಿಕ್ಯೂಸನ್ ಹಾಕಿದ್ದಾರೆ. ಇನ್ನು 127 ಸೈಟ್ ಪಡೆದವರ ಮೇಲೆ ಏಕೆ ಹಾಕಿಲ್ಲ ಎಂದು ಲಾಡ್ ಪ್ರಶ್ನಿಸಿದರು.

ಏಕೆ ಪರವಾನಗಿ ಕೊಡಿಸಿಲ್ಲ:

ಕೇಂದ್ರದಲ್ಲಿ ತಮ್ಮ ಸರ್ಕಾರ ಬಂದ ತಕ್ಷಣ ಮಹದಾಯಿ ಕಾಮಗಾರಿ ಆರಂಭಿಸಲು ಪರವಾನಗಿ ಕೊಡಿಸುವುದಾಗಿ ಬಿಜೆಪಿಯವರೇ ಹೇಳಿದ್ದರು. ಆದರೆ, ಇಲ್ಲಿಯ ವರೆಗೂ ಏಕೆ ಮಾಡಿಲ್ಲ? ಮಹದಾಯಿಗೆ ಕಾಮಗಾರಿ ಆರಂಭಿಸಲು ಪರವಾನಗಿ ಏಕೆ ಕೊಡಲಾಗುತ್ತಿಲ್ಲ? ಪರಿಸರ ಇಲಾಖೆ ಒಪ್ಪಿಗೆ ನೀಡಲು ಈ ಭಾಗದಲ್ಲಿ ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ನಮಗೆ ಲಿಖಿತವಾಗಿ ನೀಡಲಿ ಎಂದು ಸವಾಲು ಹಾಕಿದರು.ಎಲ್ಲ ಕಟ್ಟಡಗಳು ಸೋರುತ್ತಿವೆ

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿರುವ ಅಯೋಧ್ಯೆ ರಾಮಮಂದಿರ ಸೇರಿದಂತೆ ಎಲ್ಲ ಕಟ್ಟಡಗಳು ಸೋರುತ್ತಿವೆ. ಅದರ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲ? ದೇಶದಲ್ಲಿ ಆಹಾರ ಭದ್ರತೆ ಬಿಲ್ ಜಾರಿಗೆ ತಂದವರು ಯಾರು? ಈಗ ಮೋದಿ ಅಕ್ಕಿ ಎಂದು ಹೇಳುವ ನಾಯಕರು, ಮೊದಲು ಏಕೆ ಅಕ್ಕಿ ನೀಡಲಿಲ್ಲ? ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅಕ್ಕಿ ಸಂಗ್ರಹವಿದೆ, ರಾಜ್ಯ ಸರ್ಕಾರ ಖರೀದಿಸಲಿ ಎಂದು ಹೇಳುತ್ತಿದ್ದಾರೆ. ಅಕ್ಕಿ ಸಂಗ್ರಹವಿರುವ ಬಗ್ಗೆ ಜೋಶಿ ಅವರು ಲಿಖಿತವಾಗಿ ನೀಡಲಿ ಎಂದು ಸಚಿವ ಸಂತೋಷ ಲಾಡ್ ಸವಾಲು ಹಾಕಿದರು.