ಚಿತ್ರಾಪುರ: ಕೋಟಿ ಗಾಯತ್ರಿ ಜಪಯಜ್ಞದ ಸಂಕಲ್ಪ ದಿನ

| Published : Sep 30 2024, 01:33 AM IST / Updated: Sep 30 2024, 01:34 AM IST

ಸಾರಾಂಶ

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ದೇವತಾ ಪ್ರಾರ್ಥನೆ, ಗಣ ಹೋಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ನಮ್ಮ ಭಾವನೆಗಳು ಬೇರೆ ಬೇರೆ ಇರಬಹುದು, ಆದರೆ ನಾವೆಲ್ಲರೂ ಒಟ್ಟು ಸೇರಿದಾಗ ವ್ಯತ್ಯಾಸ ದೂರವಾಗಿ ಗೌರವ ಮೂಡಲು ಸಾಧ್ಯ. ಲೋಕದ ಒಳಿತಿಗಾಗಿ ಹಾಗೂ ಸರ್ವರ ಹಿತಕ್ಕಾಗಿ ಗಾಯತ್ರಿ ಜಪ ಯಜ್ಞವನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರಾಪುರ ಮಠದ ಶ್ರೀ ವಿಧೇಂದ್ರ ಶ್ರೀಪಾದರು ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಮತ್ತು ದ.ಕ. ಜಿಲ್ಲಾ ಘಟಕದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಚಿತ್ರಾಪುರ ಮಠದ ಸಹಕಾರದೊಂದಿಗೆ ಅ.26 ಮತ್ತು 27ರಂದು ಚಿತ್ರಾಪುರದಲ್ಲಿ ನಡೆಯಲಿರುವ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ ಪೂರ್ವಾಭಾವಿಯಾಗಿ ಭಾನುವಾರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ನಡೆದ ಸಂಕಲ್ಪ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ದೇವತಾ ಪ್ರಾರ್ಥನೆ, ಗಣ ಹೋಮ ನಡೆಯಿತು.

ರಾಜ್ಯ ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಆಶಯ ಭಾಷಣ ಮಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಮಹೇಶ್ ಕಜೆ ಮಹಾಸಭಾದ ಧ್ಯೇಯ ಉದ್ದೇಶಗಳನ್ನು ತಿಳಿಸಿದರು. ಯಾಗ ಸಮಿತಿಯ ಸಂಚಾಲಕ ಕಟೀಲಿನ ಅನುವಂಶಿಕ ಅರ್ಚಕ ಶ್ರೀಹರಿ ನಾರಾಯಣ ದಾಸ ಆಸ್ರಣ್ಣ, ಯಜ್ಞದ ಬಗ್ಗೆ ಮಾಹಿತಿ ನೀಡಿದರು.

ಶರವು ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕರ್ಣಾಟಕ ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷ ಎಂ.ಎಸ್. ಮಹಾಬಲೇಶ್ವರ ಭಟ್, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಎಂ.ಬಿ. ಪುರಾಣಿಕ್, ಶಿಕಾರಿಪುರ ಕೃಷ್ಣಮೂರ್ತಿ, ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯದ ಅರ್ಚಕರು, ಪುರೋಹಿತರು, ಸಂಸ್ಕೃತ ಶಿರೋಮಣಿಗಳು, ವೇದಜ್ಞರು ಉಪಸ್ಥಿತರಿದ್ದರು. ಪ್ರಧಾನ ಸಂಚಾಲಕ ಶ್ರೀಧರ ಹೊಳ್ಳ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಾತೆಯರು, ಸರ್ವಮಂಗಳ ಮಾಂಗಲ್ಯ ಸ್ತೋತ್ರ ಪಠಣ ಸಂಕಲ್ಪ ಮಾಡಿದರು.