ಪ್ರಕೃತಿಯ ಏರುಪೇರಿನ ನಡುವೆ ರೈತರ ಜೀವನ ಕಷ್ಟದಾಯಕ: ಎಸ್ಪಿ ಶ್ರೀಹರಿಬಾಬು

| Published : Sep 30 2024, 01:33 AM IST

ಸಾರಾಂಶ

ತೋಟಗಳು ಮಧ್ಯೆ ಇಂತಹ ಸಂವಾದ ಕಾರ್ಯಕ್ರಮಗಳು ನಡೆಯುವುದೇ ಅಪರೂಪ. ನಾನು ಒಬ್ಬ ಕೃಷಿ ಕುಟುಂಬದಿಂದ ಬಂದವನು.

ಹೊಸಪೇಟೆ: ಸದಾ ಪ್ರಕೃತಿಯ ಏರುಪೇರಿನ ನಡುವೆ ರೈತರ ಜೀವನ ಕಷ್ಟದಾಯಕ ಎಂದು ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಹೇಳಿದರು.

ತಾಲೂಕಿನ ಕಡ್ಡಿರಾಂಪುರದ ಗ್ರಾಮದ ರತ್ನಭೂಮಿಯಲ್ಲಿ ಸಖಿ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಹಸಿರಿನೊಂದಿಗೆ ಮಾತುಕತೆ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತೋಟಗಳು ಮಧ್ಯೆ ಇಂತಹ ಸಂವಾದ ಕಾರ್ಯಕ್ರಮಗಳು ನಡೆಯುವುದೇ ಅಪರೂಪ. ನಾನು ಒಬ್ಬ ಕೃಷಿ ಕುಟುಂಬದಿಂದ ಬಂದವನು. ನಮ್ಮ ಊರಿನ ದನ, ಕುರಿಗಳು ಮೇಯಿಸುವುದು, ಹೊಲದಲ್ಲಿ ಉಳುಮೆ ಮಾಡುವುದು ಎಂದರೆ ನಮಗೆ ಖುಷಿ.

ನನಗೆ ಸಿಕ್ಕಂತ ಭೂಮಿ ಸವಳು. 930 ಅಡಿ ಆಳ ತೋಡಿದಾಗ ಮೂರು ಇಂಚು ನೀರು ಬಿತ್ತು. ನಮ್ಮ ಊರಿನ ಕಡೆಯಲ್ಲಿ ನೀರು ಬರಬೇಕಂದರೆ ತುಂಬ ಕಷ್ಟ ಪಡಬೇಕಾಗುತ್ತದೆ. ಸವಳು ಭೂಮಿಯಲ್ಲಿ ನಾಲ್ಕು ಅಡಿ ಫಲವತ್ತಾದ ಮಣ್ಣು ಹಾಕಿಸಿ ಕೃಷಿ ಮಾಡುತ್ತಿದ್ದೆ. ಮಕ್ಕಳಲ್ಲಿ ಕೃಷಿ ಜೊತೆಗೆ ಬೆರೆಯುವ ಗುಣ ಬೆಳೆಸಬೇಕಾಗಿದೆ ಎಂದರು.

ಎಲ್ಲ ಮಕ್ಕಳೂ ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಈ ತರದ ಕಾರ್ಯಕ್ರಮಗಳನ್ನು ಮಕ್ಕಳಿಗೆ ತೋರಿಸುವ ಮೂಲಕ ಹೊಸ ಕಲಿಕೆ ಆಗುತ್ತದೆ. ಪ್ರತಿಯೊಬ್ಬರು ಸಾವಯವ, ಸರಳ ಸಹಜ ಕೃಷಿಯಕಡೆಗೆ ಸಾಗಬೇಕಾಗಿದೆ ಎಂದರು.

ಸಖಿ ಟ್ರಸ್ಟ್‌ನ ಡಾ.ಭಾಗ್ಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ಕೊಡುತ್ತದೆ. ರೈತರು ಭೂಮಿಯಲ್ಲಿ ಹಸಿರು ಕ್ರಾಂತಿ ಮಾಡುತ್ತಾರೆ. ನಮ್ಮ ಸಂಸ್ಥೆಯ ಸಹಕಾರದೊಂದಿಗೆ 25 ಜನರಿಗೆ ಕೈತೋಟ ಮಾಡಲು ಪ್ರಯೋಗ ಮಾಡಿದ್ದೇವೆ. ಅವರ ತೋಟಗಳಲ್ಲಿ ಈಗ ನಮಗೆ ಆರೋಗ್ಯಕರ, ವಿಷರಹಿತ ಆಹಾರ ಬೆಳೆಗಳನ್ನು ಪಡೆಯುತ್ತಿದ್ದೇವೆ. ಕೊರೋನ ಸಮಯದಲ್ಲಿ ಜನರು ಕೃಷಿ ಕೈತೋಟ ಮಾಡಲು ಪ್ರಾರಂಭಿಸಿದರು.

ಮೈನಿಂಗ್ ನಿಂದ ಹಾಳಾದ ಹೊಲಗಳಿಗೆ ಮರುರೂಪ ಕೊಡಲಾಯಿತು.

ರೈತರ ಮನೆ ಬಾಗಿಲಿಗೆ ಹೋಗೊ ಕೃಷಿ ಯೊಜನೆಗಳ ಬಗ್ಗೆ ತಿಳಿಸಿದೀವಿ. ಭೂಮಿ ಇಲ್ಲದವರಿಗೆ ಭೂಮಿ ಲೀಜಿಗೆ ಕೊಡಿಸಿ, ಅದರಿಂದ ಅವರು ಸಾವಯವ ಪದ್ಧತಿಯಲ್ಲಿ ಆಹಾರ ಪದಾರ್ಥಗಳನ್ನು ತಾವೇ ಬೆಳೆದು ಊಟ ಮಾಡಿ ಆರೋಗ್ಯ ಕಾಪಾಡಿಕೊಳ್ಳುವಂತೆ ತರಬೇತಿ ನೀಡಿದ್ದೇವೆ. ಕೃಷಿ ಪ್ರವಾಸೋದ್ಯಮ ಮಾಡುವುದು ಹೇಗೆ ಅಂತಾ ಯುವಜನರಿಗೆ ಹೇಳಿಕೊಡಲಾಗಿದೆ ಎಂದರು.

ಕೃಷಿ ಚಿಂತಕ ಮಲ್ಲಿಕಾರ್ಜುನ ಹೊಸಪಾಳ್ಯ, ಸಹಜ ಆರ್ಗ್ಯಾನಿಕ್‌ನ ಬಿ. ಸೋಮೇಶ್‌, ಕೃಷಿ ಇಲಾಖೆಯ ವೆಂಕಟೇಶ್, ಅಜೀಂ ಪ್ರೇಮಜೀ ಫೌಂಡೇಷನ್ ನ ಉದಯ ಬೇಕಲ್, ಪರಿಣತರಾದ ಡಾ.ಅಶೋಕ ಕುಮಾರ್ ರಂಜೆರ್, ಪಂಪಯ್ಯ ಸ್ವಾಮಿ, ಅನ್ನಪೂರ್ಣ ಮಾತನಾಡಿದರು. ಕಡಪ ವಿ.ಆರ್.ಡಿ.ಎಸ್. ನ ವಿಜಯ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿಕರನ್ನು ಸಖಿ ಸಂಸ್ಥೆಯಿಂದ ಸನ್ಮಾನಿಸಲಾಯಿತು. ಅಂಕುಶ್ ಕಾರ್ಯಕ್ರಮ ನಿರ್ವಹಿಸಿದರು.

ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ರತ್ನಭೂಮಿ ತೋಟದಲ್ಲಿ ನಡೆದ ಹಸಿರಿನೊಂದಿಗೆ ಮಾತುಕತೆ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಅವರು ಉದ್ಘಾಟಿಸಿದರು.