ಸಾರಾಂಶ
ಮೈಸೂರಿನ ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಸ್ಥಳ. ಅದು ತಾಯಿ ಚಾಮುಂಡೇಶ್ವರಿಯ ಆಸ್ತಿಯಾಗಿದೆ. ನಾವು ಆ ತಾಯಿಯನ್ನು ಮಹಿಷಾಸುರ ಮರ್ಧಿನಿ ಎಂದು ನಂಬುತ್ತೇವೆ.
ಉಡುಪಿ : ಮೈಸೂರಿನ ಚಾಮುಂಡಿ ಬೆಟ್ಟ ಒಂದು ಧಾರ್ಮಿಕ ಸ್ಥಳ. ಅದು ತಾಯಿ ಚಾಮುಂಡೇಶ್ವರಿಯ ಆಸ್ತಿಯಾಗಿದೆ. ನಾವು ಆ ತಾಯಿಯನ್ನು ಮಹಿಷಾಸುರ ಮರ್ಧಿನಿ ಎಂದು ನಂಬುತ್ತೇವೆ. ಮಹಿಷನ ಸಂಹಾರ ಮಾಡಿದವರು ಚಾಮುಂಡೇಶ್ವರಿ. ಈ ಭಾವನೆಗೆ ಧಕ್ಕೆಯಾಗಬಾರದು ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಅವರು ಭಾನುವಾರ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಕೃಷ್ಣಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹಿಷಾ ದಸರಾವನ್ನು ಯಾರದ್ದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಆಚರಣೆ ಮಾಡಬಹುದು. ಅದನ್ನು ಅನುಸರಿಸಿದರೆ ನಮಗೆ ಸಂತೋಷ. ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದ್ದು, ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. ಸಾರ್ವಜನಿಕ ಸ್ಥಳಗಳಲ್ಲೂ ಸರ್ಕಾರದಿಂದ ಅನುಮತಿ ಪಡೆದು ಮಾಡಿಕೊಳ್ಳಬಹುದು ಎಂದವರು ಮಹಿಷಾ ದಸರಾ ಬಗ್ಗೆ ಪ್ರತಿಕ್ರಿಯಿಸಿದರು. ಸಿಎಂ ರಾಜಿನಾಮೆ ನೀಡಲಿ:
ಮೂಡಾ ಹಗರಣ, ವಾಲ್ಮೀಕಿ ಹಗರಣದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತಿದ್ದು, ಈಗಾಗಲೇ ಎಫ್ಐಆರ್ ದಾಖಲಾಗಿದೆ. ಮುಖ್ಯಮಂತ್ರಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ರಾಜಿನಾಮೆ ಕೊಟ್ಟು ತನಿಖೆಯನ್ನು ಎದುರಿಸಲಿ. ತನಿಖೆಯಲ್ಲಿ ಏನು ವರದಿ ಬರುತ್ತದೆ ಎಂದು ಕಾದು ನಂತರ ಅದರಂತೆ ಮುಂದುವರಿಯಲಿ ಎಂದವರು ಹೇಳಿದರು.ಪುತ್ತಿಗೆ ಶ್ರೀಗಳಿಂದ ಸನ್ಮಾನ: ಒಡೆಯರ್ ಅವರು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಈ ಸಂದರ್ಭ ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಪಡೆದು ಪ್ರಸಾದ ಸ್ವೀಕರಿಸಿದರು. ಶ್ರೀಗಳು ಒಡೆಯರ್ ಅವರನ್ನು ಸನ್ಮಾನಿಸಿದರು.