ತಡರಾತ್ರಿಯ ನಿದ್ದೆಯಿಂದ ಪೂರ್ಣ ಪ್ರಯೋಜನವಿಲ್ಲ

ದೇಹದ ಅಗ್ನಿ ಪ್ರಬಲವಿದ್ದರೆ ವಿಷವೂ ಜೀರ್ಣ

ಕನ್ನಡಪ್ರಭ ವಾರ್ತೆ ಗೋಕರ್ಣ

ರಸಗಳಿಗೂ ಭಾವಕ್ಕೂ ಗಾಢವಾದ ಸಂಬಂಧವಿದ್ದು, ಸೇವಿಸುವ ಆಹಾರದ ರಸಗಳ ಭಾವಕ್ಕೆ ಅನುಗುಣವಾಗಿ ಜೀವಿಯ ದೇಹಭಾವಗಳಲ್ಲಿ ಅವು ಪ್ರತಿಧ್ವನಿತವಾಗುತ್ತವೆ. ಸಿಹಿಯು ಸಂತೋಷ ಉಂಟುಮಾಡಿದರೆ, ಖಾರ ಕೋಪವನ್ನು, ಕಹಿ ದುಃಖವನ್ನು, ಹುಳಿಯು ಗರ್ವ ಭಾವನೆಯನ್ನು ಉಂಟುಮಾಡುತ್ತದೆ. ಜನಸಾಮಾನ್ಯನಿಗೆ ಎಲ್ಲಾ ಭಾವದ ಅವಶ್ಯಕತೆಯಿದ್ದು, ಷಡ್ರಸಗಳಿಂದ ಕೂಡಿದ ಆಹಾರವನ್ನು ಸೇವಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.

ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ಅನ್ನಬ್ರಹ್ಮ ಚಾತುರ್ಮಾಸ್ಯದ ಗುರುವಾರದ ಧರ್ಮಸಭೆಯಲ್ಲಿ ಅನ್ನಂ ಬ್ರಹ್ಮ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಆಯುರ್ವೇದವು ದೇಹ ವಿಜ್ಞಾನದ ವಿಷಯದಲ್ಲಿ ಅಗಾಧವಾದ ಸಂಶೋಧನೆ ಮಾಡಿದ್ದು, ಆಧುನಿಕ ವಿಜ್ಞಾನವೂ ಸಂಶೋಧನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಯೋಗ ಶಾಸ್ತ್ರ ಹಾಗೂ ಆಯುರ್ವೇದವು ಅತ್ಯಂತ ಸಣ್ಣ ಸಣ್ಣ ವಿಚಾರಗಳನ್ನು ವಿವರಿಸುತ್ತದೆ. ಯಂತ್ರಗಳಿಲ್ಲದೇ ನಮ್ಮ ಆಚಾರ್ಯರು ಮಾಡಿದ ಸಾಧನೆ ಅನುಪಮ. ಸಾಮಾನ್ಯವಾಗಿ ಆಹಾರ ಪಚನವಾಗುವುದಕ್ಕೆ ೪ ಗಂಟೆಗಳು ಬೇಕು. ಆಹಾರವು ಮೂರು ಹಂತದಲ್ಲಿ ಪಚನವಾಗುತ್ತದೆ. ವಿವಿಧ ಹಂತದಲ್ಲಿ ಯಾವ ಯಾವ ರಸ ಉತ್ಪತ್ತಿಯಾಗುತ್ತದೆ ಎಂದೂ ವಿವರಿಸಿದ್ದಾರೆ. ಆದರೆ ನಮ್ಮ ತಲೆಮಾರಿಗೆ ಇದು ಮಂಗನ ಕೈಯಿಗೆ ಕೊಟ್ಟ ಮಾಣಿಕ್ಯದಂತಾಗಿದ್ದು, ನಮಗೆ ನಮ್ಮ ಪೂರ್ವಜರ ಸಂಶೋಧನೆಗಳ ಅರಿವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ದೇಹದಲ್ಲಿ ಅಗ್ನಿ ಉತ್ತುಂಗದಲ್ಲಿದ್ದರೆ ಎಂತಹಾ ವಿಷವನ್ನೂ ಜೀರ್ಣಮಾಡಿಕೊಳ್ಳಬಹುದು. ಇದಕ್ಕೆ ನಳ ಮಹಾರಾಜ ಉದಾಹರಣೆಯಾಗಿದ್ದು, ನಳನು ಕಾರ್ಕೋಟ ಸರ್ಪದ ವಿಷವನ್ನೇ ಜೀರ್ಣಮಾಡಿಕೊಂಡ ಎಂದು ನಳನ ಅಗ್ನಿಜಯ ಸಾಮರ್ಥ್ಯವನ್ನು ವಿವರಿಸಿದರು. ಆಹಾರವು ದೇಹದ ಧಾತುಗಳಾಗಿ ಪರಿವರ್ತನೆಯಾಗಲು ಊಷ್ಮಾ, ವಾಯು, ಕ್ಲೇದ, ಸ್ನೇಹ, ಕಾಲ ಮತ್ತು ಸಮಯೋಗ ಎಂಬ ಆರು ಅಂಶಗಳು ಕಾರ್ಯನಿರ್ವಹಿಸುತ್ತವೆ. ಇವೆಲ್ಲವೂ ಸರಿಯಾದ ಸಮಯ ಮತ್ತು ಸಮತೋಲನದೊಂದಿಗೆ ಕಾರ್ಯನಿರ್ವಹಿಸಿದಾಗ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯುತ್ತದೆ. ಆಹಾರವನ್ನು ಸಮರ್ಪಕವಾಗಿ ಅಗಿದು ರಸವಾಗುವಂತೆ ಮಾಡಿ ಸೇವಿಸಬೇಕು ಹಾಗೂ ನೀರನ್ನು ಗುಟುಕು ಗುಟುಕಾಗಿ ಸೇವಿಸಬೇಕು. ಊಟದ ಮಧ್ಯೆ ಅತಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮತೋಲನಕ್ಕೆ ಧಕ್ಕೆಯಾಗಬಹುದು ಎಂಬ ಅಭಿಪ್ರಾಯವೂ ಇದೆ ಎಂದರು.

ಹೊನ್ನಾವರ ಹವ್ಯಕ ಮಂಡಲದ ಕರ್ಕಿ, ಅಪ್ಸರಕೊಂಡ, ಭಟ್ಕಳ, ಮರವಂತೆ, ಭವತಾರಿಣೀ ಹವ್ಯಕ ವಲಯಗಳ ಪರವಾಗಿ ಉದಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ನಾಗರಾಜ ಮತ್ತಿಗಾರ, ರಾಧಾಕೃಷ್ಣ ಭಟ್ ಭಟ್ಕಳ, ಹರಿಪ್ರಸಾದ ಪೆರಿಯಪ್ಪು, ಜಿ.ಎಸ್. ಹೆಗಡೆ, ಸುಧಾಕರ ಬಡಗಣಿ, ವಿಷ್ಣು ಭಟ್ ಕವಲಕ್ಕಿ, ದಿನಪ್ರಧಾನರಾಗಿ ರಾಮ ಭಟ್ ರಾಮಕುಂಜ ದಂಪತಿಗಳು ಉಪಸ್ಥಿತರಿದ್ದರು.