ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಹಳಿಯಾಳಅರಸು ಅವರ ನೀತಿಗಳು, ಯೋಜನೆಗಳು ಕೇವಲ ಅಭಿವೃದ್ಧಿಯ ಯೋಜನೆಗಳಾಗಿರದೇ ಶೋಷಿತ ಸಮುದಾಯಗಳಿಗೆ ಗೌರವ, ಅವಕಾಶ ಮತ್ತು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಗಳಾಗಿರಿಂದ ಅವರನ್ನು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಕರೆಯಲಾಗುತ್ತಿದೆ ತಾಪಂ ಇಒ ವಿಲಾಸರಾಜ್ ಪ್ರಸನ್ನ ಹೇಳಿದರು.
ಗುರುವಾರ ಪಟ್ಟಣದ ದೇವರಾಜ ಅರಸು ಭವನದಲ್ಲಿ ಆಯೋಜಿಸಿದ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅರಸು ಅವರ ಆಡಳಿತಾವಧಿಯು ಕರ್ನಾಟಕದ ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಒಂದು ಮಹತ್ವದ ತಿರುವುದು ಎಂದು ಹೇಳಬಹುದು. ಜಾತಿ ವ್ಯವಸ್ಥೆಯ ಕುರಿತು ಅರಸು ಅವರ ಚಿಂತನೆಯು ಸ್ಪಷ್ಟವಾಗಿತ್ತು, ಅವರು ಜಾತಿಯನ್ನು ಸಮಾಜದ ಅನ್ಯಾಯ ಅಸಮಾನತೆಯ ಮೂಲವೆಂದು ಕಂಡು ಅದನ್ನು ನಿಮೂರ್ಲನೆ ಮಾಡುವುದೇ ತಮ್ಮ ಮೊದಲ ಕರ್ತವ್ಯವೆಂದು ಭಾವಿಸಿದ್ದರು. ಭೂಸುಧಾರಣೆಯ ಕಾಯ್ದೆ ಜಾರಿಗೆ ತರುವ ಮೂಲಕ ಭೂಹೀನರು ಮತ್ತು ಹಿಂದುಳಿದ ವರ್ಗದವರಿಗೆ ಭೂಸ್ವಾಮ್ಯದ ಹಕ್ಕನ್ನು ನೀಡಿದರು. ಹಿಂದುಳಿದ ವರ್ಗಗಳ ಆಯೋಗ, ವಿದ್ಯಾರ್ಥಿ ನಿಲಯಗಳು, ಮೀಸಲಾತಿ ಕ್ರಮಗಳು, ಸಾಲಮನ್ನಾ, ಅಸ್ಪಶ್ಯತೆ ನಿವಾರಣೆಯಂತಹ ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳು ಮೂಲಕ ಇನ್ನೂ ಅವರು ನಮ್ಮ ಅಜರಾಮರಾಗಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ಸಾಹಿತಿ ಬಸವರಾಜ ಗಾರ್ಗಿ ಅರಸು ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯು ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ವಸತಿ ನಿಲಯದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.
ಬಿಸಿಎಂ ಕಲ್ಯಾಣಾಧಿಕಾರಿ ಸುಜಾತಾ ಖಡತರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಳಿಯಾಳ, ತಾಲೂಕಾಡಳಿತದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಡಿ. ಮಡಿವಾಳ, ತಾಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸಿರಾಜ್ ಮುನವಳ್ಳಿ, ತಾಲೂಕು ಡಿಎಸ್ಎಸ್ ಅಧ್ಯಕ್ಷ ಮಾರುತಿ ಕಲಬಾವಿ, ಜೀಜಾಮಾತಾ ಮರಾಠ ಮಹಿಳಾ ಸಂಘದ ಅಧ್ಯಕ್ಷೆ ಮಂಗಳಾ ಕಶೀಲಕರ, ಪುರಸಭಾ ವ್ಯವಸ್ಥಾಪಕ ಈರಣ್ಣ ಕೊಡ್ಲಿ, ಬಿಸಿಎಂ ವಿಸ್ತೀರ್ಣಾಧಿಕಾರಿ ಶ್ರೀಶೈಲ್ ಮೋದಿ, ಸಿಬ್ಬಂದಿ ಲಿಂಗಪ್ಪ ತಳವಾರ ಹಾಗೂ ಇತರರು ಇದ್ದರು. ವಸತಿ ನಿಲಯದ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಚಿದಾನಂದ ಕಾರ್ಯಕ್ರಮ ನಿರ್ವಹಿಸಿದರು.