ಸಾರಾಂಶ
ಹಿರಿಯೂರು: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಜರುಗಿದ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವುದನ್ನು ಬಿಜೆಪಿ ನಾಮ ನಿರ್ದೇಶಿತ ಮಾಜಿ ನಗರಸಭಾ ಸದಸ್ಯ ಕೇಶವಮೂರ್ತಿ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬೆಂಗಳೂರು ನಗರದ ಬಿದರಹಳ್ಳಿ ಹೋಬಳಿಯ ಈರಂಡಳ್ಳಿಯಲ್ಲಿ ರಾಮ ಸೀತಾ ದೇವಾಲಯ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡುವಾಗ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಎಲ್ಲರನ್ನು ಘೋಷಣೆ ಕೂಗುವಂತೆ ಹುರಿದುಂಬಿಸಿದ್ದು, ಸ್ವಾಗತಾರ್ಹ ಹಾಗೂ ಅಭಿನಂದನಾರ್ಹವಾಗಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತನಾಗಿ ಸಂತೋಷದಿಂದ ಸ್ವಾಗತಿಸುತ್ತೇನೆ.ಕೇಸರಿ ಕರವಸ್ತ್ರ ನಿರಾಕರಿಸಿ, ಕೆಂಪು ತಿಲಕ ಹಚ್ಚಲು ನಿರಾಕರಿಸಿದ್ದ ಅವರು ಅಯೋಧ್ಯೆ ರಾಮನೇ ಏಕೆ ಬೇಕು ನನ್ನ ಊರಿನಲ್ಲಿ ರಾಮಮಂದಿರ ಕಟ್ಟಿಸಿರುವೆ. ಅಯೋಧ್ಯೆ ರಾಮನಿಗೆ ದೇಣಿಗೆ ಕೊಡಬೇಕಾ ಎಂಬ ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ್ದು ಮತ್ತು ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುವೆ ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯ. ಆದರೆ ಸಮಯ ಸಂದರ್ಭ ಪರಿಸ್ಥಿತಿ ಮತ್ತು ಪಕ್ಷದ ಮಿತಿಗಳಿಗೆ ಅವರ ಹೇಳಿಕೆಗಳು ರಾಜಕೀಯ ಅನಿಸಿದರು ಬಿಜೆಪಿ ಕಾರ್ಯಕರ್ತರು ಪ್ರಭು ಶ್ರೀ ರಾಮನ ಬಗ್ಗೆ ಪೂರಕ ಹಾಗೂ ಧನ್ಯತ ಹೇಳಿಕೆಗೆ ಅವರು ಯಾರೇ ಆದರೂ ಅಭಿನಂದಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.