ಎಲ್ಲ ಸಮುದಾಯ ಅಭಿವೃದ್ಧಿಗೆ ಸಿಎಂ ಶ್ರಮ: ಸಚಿವ ಎನ್‌.ಎಸ್‌. ಬೋಸರಾಜು

| Published : Feb 05 2024, 01:48 AM IST

ಎಲ್ಲ ಸಮುದಾಯ ಅಭಿವೃದ್ಧಿಗೆ ಸಿಎಂ ಶ್ರಮ: ಸಚಿವ ಎನ್‌.ಎಸ್‌. ಬೋಸರಾಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ರಾಯಚೂರು ಜಿಲ್ಲಾ ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘದ ಸಂಸ್ಥಾಪನಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸಚಿವ ಎನ್.ಎಸ್ ಬೋಸರಾಜು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪುರೋಹಿತ ಅರ್ಚಕರ ಸಂಘವು ಇಡೀ ರಾಜ್ಯಕ್ಕೆ ಮಾದರಿಯಾಗಲಿ, ಆ ನಿಟ್ಟಿನಲ್ಲಿ ಸಂಘದ ಚಟುವಟಿಕೆಗಳನ್ನು ರೂಪಿಸಿ, ಸಮಸ್ಯೆಗಳ ನಿವಾರಣೆಗೆ ಸಂಘವು ಶ್ರಮಿಸಲಿ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

ಸ್ಥಳೀಯ ವೀರಶೈವ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ರಾಯಚೂರು ಜಿಲ್ಲಾ ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘದ ಸಂಸ್ಥಾಪನಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ರವಿವಾರ ಮಾತನಾಡಿ, ಧಾರ್ಮಿಕ, ಭೂಮಿ ಪೂಜೆ ಇನ್ನಿತರ ಶುಭ ಕಾರ್ಯಗಳು ಪುರೋಹಿತರು, ಅರ್ಚಕರು ಇಲ್ಲದೇ ನಡೆಯುವುದಿಲ್ಲ. ಅವರ ಬೇಡಿಕೆ ಈಡೇರಿಕೊಳ್ಳಲು ಸಂಘಟನೆ ಅಗತ್ಯ ಎಂದರು.

ಸಮಾಜದಲ್ಲಿ ಅರ್ಚಕರಿಗೆ, ಪುರೋಹಿತರಿಗೆ ಗೌರವದ ಸ್ಥಾನವಿದೆ. ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತರಾಗದೇ ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲಿಯೂ ಪುರುಹಿತರೂ, ಅರ್ಚಕರು ಭಾಗಯಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಾಗಲಿ ಎಂದು ಹೇಳಿದರು.

ರಾಜ್ಯದ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಬಸವಣ್ಣರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ. ಪುರೋಹಿತರ, ಅರ್ಚಕರ ಸಂಘದ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸಲಾಗುವುದು. ಅದೇ ರೀತಿ ಸಂಘದ ಕಚೇರಿಗೆ ಶಾಸಕರು ಸಿ.ಎ. ಸೈಟ್ ನೀಡಿದರೆ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರು. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ಮಾತನಾಡಿ, ಪೂಜಾ ಕೈಂಕರ್ಯ ಮಾಡುವ ಅನೇಕ ಅರ್ಚಕರು, ಪುರೋಹಿತರೂ ಬಡವರಿದ್ದಾರೆ. ಇನ್ನೂ ಹಲವೆಡೆ ಕಂತೆ ಭಿಕ್ಷೆ ಬೇಡುವ ಪದ್ದತಿ ಇದೆ. ಇವರ ಅಭಿವೃದ್ಧಿಗೆ ಸಂಘದ ರಚನೆ ಅವಶ್ಯ. ಅರ್ಚಕರ, ಪುರೋಹಿತರ ಸಂಘ ವೈಯಕ್ತಿಕ ಲಾಭಕ್ಕೆ ಸೀಮಿತವಾಗದೇ ಸಮಾಜಕ್ಕೆ ಅನುಕೂಲವಾಗಲಿ. ಅರ್ಚಕರು, ಪುರೋಹಿತರು ಸಮಾಜಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಬೇಕು. ನಾಗರಿಕ ಸೌಲಭ್ಯದಡಿ ನಿವೇಶನ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಧರ್ಮ, ದೇವರ ಮೇಲಿನ ಭಕ್ತಿ ಕಡಿಮೆಯಾಗುತ್ತಿದ್ದು ಕಳವಳಕಾರಿ ಸಂಗತಿ. ಅರ್ಚಕರು, ಪುರುಹಿತರು ಧರ್ಮ, ಸಂಸ್ಕೃತಿ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ ಎಂದರು.

ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಜಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರು ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವ ಶಿವಾಚಾರ್ಯ ಸ್ವಾಮೀಜಿ, ದೇವದುರ್ಗದ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯರು, ದೇವರಬೂಪುರ ಅಮರೇಶ್ವರ ಮಠದ ಗಜದಂಡ ಶಿವಾಚಾರ್ಯ ಸ್ವಾಮೀಜಿ, ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶರಣಯ್ಯ ಸ್ವಾಮಿ ಸೇರಿ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.