ಶಿವಮೊಗ್ಗ ಜಿಲ್ಲೆ ಮೂಗಿಗೆ ತುಪ್ಪ ಸವರಿದ ಸಿಎಂ ಸಿದ್ದರಾಮಯ್ಯ

| Published : Feb 17 2024, 01:18 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ ಮಲೆನಾಡು ರಾಜಧಾನಿ ಶಿವಮೊಗ್ಗಕ್ಕೆ ಸಿಹಿ-ಕಹಿಯ ಬಜೆಟ್‌ ಎಂಬಂತೆ ಭಾಸವಾಗುತ್ತಿದೆ. ಕೊಟ್ಟೂ ಕೊಡದಿರುವ ತಂತ್ರಗಾರಿಕೆ ಕಾಣುತ್ತಿದೆ. ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದನ್ನು ಹೊರತುಪಡಿಸಿ, ಪ್ರಮುಖವಾದ ಯೋಜನೆಗಳ ಕುರಿತು ಯಾವ ಪ್ರಸ್ತಾಪವೂ ಇಲ್ಲವಾಗಿವೆ.

* ಅಲ್ಪ ಸಿಹಿ- ಭಾರಿ ಕಹಿ- ಶಿವಮೊಗ್ಗದಲ್ಲಿ ಹೈ ಸೆಕ್ಯೂರಿಟಿ ಕಾರಾಗೃಹ ನಿರ್ಮಾಣಕ್ಕೆ ₹100 ಕೋಟಿ ಅನುದಾನ

- ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಫುಡ್‌ ಪಾರ್ಕ್‌ ಸ್ಥಾಪಿಸುವ ಪ್ರಕಟಣೆ

- ಸೊರಬದಲ್ಲಿ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ

- ಎಸ್‌. ಬಂಗಾರಪ್ಪ ಅವರ ಪ್ರತಿಮೆ ಸ್ಥಾಪಿಸುವ ಕುರಿತು ಪ್ರಸ್ತಾಪ

- ಎಂಪಿಎಂ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿ ಕುರಿತು ಪ್ರಸ್ತಾಪವೇ ಆಗಿಲ್ಲ

- ರಾತ್ರಿವೇಳೆ ವಿಮಾನ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸುವ ಪ್ರಸ್ತಾಪವಿಲ್ಲ

- ಆಯುಷ್‌ ವಿವಿ ಸ್ಥಾಪನೆಗೆ ಹಣ ನಿಗದಿಯಾಗಿಲ್ಲ, ಪ್ರವಾಸೋದ್ಯಮ ಕುರಿತು ಯಾವ ಪ್ರಸ್ತಾಪಗಳಿಲ್ಲ

- ಸಕ್ರೇಬೈಲು ಬಿಡಾರದ ಅಭಿವೃದ್ಧಿಗೆ ₹36 ಕೋಟಿ ನಿಗದಿಯಾಗಿದ್ದನ್ನು ಪುನರ್ಪರಿಶೀಲಿಸುವ ಸೊಲ್ಲಿಲ್ಲ

- ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಮಂಕಿ ಪಾರ್ಕ್‌ ಸ್ಥಾಪನೆ ಬೇಡಿಕೆಗಳ ಬಗ್ಗೆ ಸರ್ಕಾರ ಮೌನ

- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್ ಮಲೆನಾಡು ರಾಜಧಾನಿ ಶಿವಮೊಗ್ಗಕ್ಕೆ ಸಿಹಿ-ಕಹಿಯ ಬಜೆಟ್‌ ಎಂಬಂತೆ ಭಾಸವಾಗುತ್ತಿದೆ. ಕೊಟ್ಟೂ ಕೊಡದಿರುವ ತಂತ್ರಗಾರಿಕೆ ಕಾಣುತ್ತಿದೆ. ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದನ್ನು ಹೊರತುಪಡಿಸಿ, ಪ್ರಮುಖವಾದ ಯೋಜನೆಗಳ ಕುರಿತು ಯಾವ ಪ್ರಸ್ತಾಪವೂ ಇಲ್ಲ.

ಜಿಲ್ಲೆಗೆ ಏನೇನು ಸಿಕ್ಕಿದೆ?:

ಫುಡ್‌ ಪಾರ್ಕ್:

ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ಫುಡ್‌ ಪಾರ್ಕ್‌ ಸ್ಥಾಪಿಸಲು 100 ಎಕರೆ ಜಾಗ ಕೂಡ ನಿಗದಿಯಾಗಿತ್ತು. ಇಲ್ಲಿ ಫುಡ್‌ ಪಾರ್ಕ್ ಸ್ಥಾಪನೆ ಕುರಿತು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ, ಇದನ್ನು ಸರ್ಕಾರವೇ ಮಾಡುವ ಬದಲು ಖಾಸಗಿ ಸಹಭಾಗಿತ್ವ ಎಂದು ಹೇಳಲಾಗಿದೆ. ಹೀಗಾಗಿ, ಇದು ಜಾರಿಯಾಗುವ ಸಾಧ್ಯತೆ ತೀರಾ ಕಡಿಮೆ.

ಶಿವಮೊಗ್ಗದಲ್ಲಿ ಹೈ ಸೆಕ್ಯೂರಿಟಿ ಕಾರಾಗೃಹ ನಿರ್ಮಾಣಕ್ಕೆ ₹100 ಕೋಟಿ ಅನುದಾನ ಒದಗಿಸಲಾಗಿದೆ. ಆದರೆ, ಸ್ವರೂಪದ ಕುರಿತು ಹೇಳಿಲ್ಲ. ಇನ್ನು ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ ಒತ್ತು ಕೊಡುವುದಾಗಿ ತಿಳಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಬೇಡಿಕೆ ಇಲ್ಲಿ ಕೆಲಸ ಮಾಡಿದ್ದು, ಸೊರಬದಲ್ಲಿ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣದ ಪ್ರಸ್ತಾಪ ಮಾಡಲಾಗಿದೆ. ಜೊತೆಗೆ ಎಸ್‌. ಬಂಗಾರಪ್ಪ ಅವರ ಪ್ರತಿಮೆ ಸ್ಥಾಪಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ. ವಿಜ್ಞಾನ ಕೇಂದ್ರ ಅಥವಾ ತಾರಾಲಯ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ-ಬೊಮ್ಮನಕಟ್ಟೆ ಮಾರ್ಗದಲ್ಲಿ ರೈಲು ಮೇಲ್ಸೇತುವೆ ನಿರ್ಮಾಣವನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಘೋಷಿಸಲಾಗಿದೆ. ವಾಸ್ತವವಾಗಿ ಇಂತಹ ಮೇಲ್ಸೇತುವೆಗಳನ್ನು ಕೇಂದ್ರ ಸರ್ಕಾರದ ಬಜೆಟ್‌ ನಲ್ಲಿ ಘೋಷಿಸಲಾಗುತ್ತಿತ್ತು. ಈ ಬಾರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಆದರೆ ಈಗಾಗಲೇ ಸಂಸದ ಬಿ.ವೈ. ರಾಘವೇಂದ್ರ ಅವರು ಸಿಆರ್‌ಎಫ್‌ ಫಂಡ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ ಶೇ.50 ಪಾಲುದಾರಿಕೆಯಲ್ಲಿ ಪ್ರಸ್ತಾವನೆ ಕಳುಹಿಸಿ ಮಂಜೂರಾತಿಯ ಹಂತದಲ್ಲಿ ಇತ್ತು. ಈಗ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಇದನ್ನು ಘೋಷಿಸಲಾಗಿದೆ. ಜಿಲ್ಲೆ ಕೈ ತಪ್ಪಿದ್ದೇನು?:

ಪ್ರಮುಖವಾಗಿ ಎಂಪಿಎಂ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿ ಕುರಿತು ಪ್ರಸ್ತಾಪವೇ ಆಗಿಲ್ಲ. ಜಿಲ್ಲೆಯ ಆರ್ಥಿಕತೆಗೆ ನೆರವು ನೀಡುತ್ತದೆ ಎಂದು ಭಾವಿಸಿದ್ದ ಈ ಕಾರ್ಖಾನೆಯ ಪುನರುಜ್ಜೀವನ ಕುರಿತು ಯಾವ ಪ್ರಸ್ತಾಪವೂ ಇಲ್ಲ ಎನ್ನುವುದು ಬೇಸರದ ಸಂಗತಿ. ಶಿವಮೊಗ್ಗದ ಮಟ್ಟಿಗೆ ಮುಕುಟಪ್ರಾಯ ಆಗಿರುವ ವಿಮಾನ ಸಂಚಾರಕ್ಕೆ ಇನ್ನಷ್ಟು ಪೂರಕ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ರಾತ್ರಿ ವೇಳೆ ವಿಮಾನ ಸಂಚಾರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಸ್ತಾಪ ನಿರೀಕ್ಷಿಸಲಾಗಿತ್ತು. ಆದರೆ ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಇನ್ನೊಂದು ಪ್ರಮುಖ ಬೇಡಿಕೆಯಾಗಿದ್ದ ಮತ್ತು ಈಗಾಗಲೇ ಘೋಷಣೆಯಾಗಿದ್ದ ಆಯುಷ್‌ ವಿವಿ ಸ್ಥಾಪನೆಗೆ ಹಣ ನಿಗದಿಯಾಗಿಲ್ಲ. ಪ್ರವಾಸೋಧ್ಯಮದ ಕುರಿತು ಯಾವ ಪ್ರಸ್ತಾಪವೂ ಇಲ್ಲ. ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ದಿಗೆ ಪೂರಕವಾಗಿ ಗಾಜನೂರು ಸಮೀಪದ ಸಕ್ರೇಬೈಲು ಬಿಡಾರದ ಅಭಿವೃದ್ಧಿಗೆ ₹36 ಕೋಟಿ ನಿಗದಿಯಾಗಿದ್ದನ್ನು ಸಿದ್ದರಾಮಯ್ಯ ಸರ್ಕಾರವೇ ವಾಪಸ್ಸು ಪಡೆದಿದ್ದು, ಈ ಬಗ್ಗೆ ಪುನರ್‌ ಪರಿಶೀಲಿಸುವ ಅಥವಾ ಪುನಃ ಹಣ ಒದಗಿಸುವ ಕುರಿತು ಕೂಡ ಬಜೆಟ್‌ನಲ್ಲಿ ಯಾವ ಪ್ರಸ್ತಾಪವೂ ಇಲ್ಲವಾಗಿದೆ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಮಂಕಿ ಪಾರ್ಕ್‌ ಸ್ಥಾಪನೆ ಕುರಿತ ಬೇಡಿಕೆಯ ಬಗ್ಗೆ ಬಜೆಟ್‌ನಲ್ಲಿ ಸರ್ಕಾರ ಮೌನ ತಾಳಿದೆ.

- - - (ಫೋಟೋ: ಬಜೆಟ್‌-ಎಸ್‌ಎಂಜಿ)

(-ಸಾಂದರ್ಭಿಕ ಚಿತ್ರ)