ಮಹನೀಯರ ಆದರ್ಶ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ: ಡಾ.ವಿದ್ಯಾಕುಮಾರಿ

| Published : Feb 17 2024, 01:18 AM IST

ಮಹನೀಯರ ಆದರ್ಶ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಅರ್ಥ: ಡಾ.ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸವಿತಾ ಸಮಾಜ ಆಶ್ರಯದಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಹನೀಯರ ಜಯಂತಿ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲಮಹನೀಯರ ಜಯಂತಿಗಳ ಆಚರಣೆ ಸಂದರ್ಭ ಅವರ ಜೀವನ ಶೈಲಿ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಗಳ ಆಚರಣೆ ಅರ್ಥಪೂರ್ಣವಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಶುಕ್ರವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸವಿತಾ ಸಮಾಜ ಆಶ್ರಯದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸವಿತಾ ಸಮಾಜದಂತಹ ಹಿಂದುಳಿದ ಸಮುದಾಯಗಳು ಆತ್ಮವಿಶ್ವಾಸದಿಂದ ಜೀವನ ನಡೆಸಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು. ಜಯಂತಿಗಳ ಆಚರಣೆಯ ಮೂಲಕ ಸಮುದಾಯಗಳು ಒಗ್ಗೂಡಿದಾಗ ಸಮಾಜದ ಬೆಳವಣಿಗೆಯ ಕುರಿತು ಚಿಂತನೆ ನಡೆಸಲು ಸಾಧ್ಯವಾಗುತ್ತದೆ ಎಂದರು.ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಹಾಗೂ ಜ್ಞಾನದ ಅವಶ್ಯಕತೆ ಇದ್ದು, ಸಮುದಾಯದ ಮುಖಂಡರು ಮೂಲ ವೃತ್ತಿಯೊಂದಿಗೆ ಶೈಕ್ಷಣಿಕವಾಗಿಯೂ ಸಮುದಾಯವನ್ನು ಮುಖ್ಯ ವಾಹಿನಿಗೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಸವಿತಾ ಸಮಾಜದ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲ್ ಉಪನ್ಯಾಸ ನೀಡಿ, ಕ್ಷೌರಿಕ ಸಮಾಜದ ಮೂಲಪುರುಷರಾದ ಸವಿತಾ ಮಹರ್ಷಿಗಳು ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ರಚಿಸಿದರು. ಸವಿತಾ ಸಮುದಾಯದವರು ಅನಾದಿಕಾಲದಿಂದಲೂ ಸಾಂಪ್ರದಾಯಿಕವಾಗಿ 12 ಪ್ರಮುಖ ವೃತ್ತಿಗಳನ್ನು ನಡೆಸಿಕೊಂಡು ಬಂದಿದ್ದು, ರಾಜ್ಯದಲ್ಲಿ ಇಂದು ಕ್ಷೌರಿಕ ಜನಾಂಗವನ್ನು ಪ್ರಾದೇಶಿಕವಾಗಿ ಸವಿತಾ ಸಮಾಜ, ಹಡಪದ, ಭಂಡಾರಿ ಇತ್ಯಾದಿ 27 ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಸಮುದಾಯದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೀಕ್ಷಿತ್ ನಿರೂಪಿಸಿದರು. ರಾಜು ಭಂಡಾರಿ ವಂದಿಸಿದರು.