ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ: ಡಾ. ವಿದ್ಯಾಕುಮಾರಿ ಆಶಯ

| Published : Feb 17 2024, 01:18 AM IST

ಸಾರಾಂಶ

ಉಡುಪಿ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಬೀಡಿ ಕಾರ್ಮಿಕರು ಪರ್ಯಾಯ ಉದ್ಯೋಗವನ್ನು ಕೈಗೊಳ್ಳುವಂತೆ ಅರಿವು ಮೂಡಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲಉಡುಪಿ ಜಿಲ್ಲೆಯಲ್ಲಿ ಈಗಾಗಲೇ 42 ಮಹಿಳೆಯರು ಅನಾರೋಗ್ಯಕರ ಬೀಡಿ ಕಟ್ಟುವ ಉದ್ಯೋಗವನ್ನು ಬಿಟ್ಟು ಬೇರೆ ಉದ್ಯೋಗ ಮಾಡಲು ಸಂಜೀವಿನಿ ಕಾರ್ಯಕ್ರಮದಡಿ ಸದಸ್ಯತ್ವ ಪಡೆದುಕೊಂಡಿರುದ್ದಾರೆ. ಇತರ ಬೀಡಿ ಕಾರ್ಮಿಕರಿಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ಸಾರ್ವಜನಿಕರು ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಅವರು ಇತರೆ ಉದ್ಯೋಗಗಳನ್ನು ಕೈಗೊಳ್ಳುವ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಅವರು ಶುಕ್ರವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮಮಟ್ಟಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಜನರ ಮನವೊಲಿಸಿ, ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಿ, ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂದವರು ಹೇಳಿದರು.ಬಹುಮಹಡಿಗಳ ವಸತಿ ಸಮುಚ್ಛಯಗಳಲ್ಲಿ ವಾಸಿಸುವವ ಜನರ ಮನವೊಲಿಸಿ, ಅಂತಹ ಸಮುಚ್ಛಯಗಳನ್ನು ತಂಬಾಕು ಉತ್ಪನ್ನಗಳ ಮುಕ್ತ ವಲಯವೆಂದು ಘೋಷಿಸಬೇಕು ಎಂದ ಅವರು, ತಂಬಾಕು ಉತ್ಪನ್ನಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸಿರುವ ಕುಂದಾಪುರ ತಾಲೂಕಿನ ಸ್ವಸ್ತಿಕ್ ಎನ್ ಕ್ಲೇವ್ ಬಹುಮಹಡಿ ವಸತಿ ಸಮುಚ್ಛಯವನ್ನು ತಂಬಾಕು ಮುಕ್ತ ಪ್ರದೇಶವಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದರು.ಜಿಲ್ಲೆಯಲ್ಲಿ ಫೆ.1 ರಿಂದ 15 ದಿನಗಳಲ್ಲಿ ವಿಶೇಷ ಕೋಟ್ಪಾ ನಿಯಂತ್ರಣ ತನಿಖಾ ದಳ ತಂಡ ರಚಿಸಿ, 82 ದಾಳಿಗಳನ್ನು ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 698 ಅಂಗಡಿಗಳಿಂದ 99,204 ರು. ದಂಡ ಸಂಗ್ರಹಿಸಲಾಗಿದೆ ಎಂದವರು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಸಹಾಯಕ ಕಮಿಷನರ್ ರಶ್ಮಿ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಢಾದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.