24ರಂದು ಉಳವಿ ಚೆನ್ನಬಸವೇಶ್ವರ ದೇವರ ಮಹಾ ರಥೋತ್ಸವ

| Published : Feb 17 2024, 01:18 AM IST

ಸಾರಾಂಶ

ಜೋಯಿಡಾ ತಾಲೂಕಿನ ಉಳವಿಯ ಚೆನ್ನಬಸವೇಶ್ವರ ದೇವರ ಮಹಾರಥೋತ್ಸವ ಫೆ. ೨೪ರಂದು ಸಂಜೆ ೪ ಗಂಟೆಗೆ ನಡೆಯಲಿದೆ. ಫೆ. 16ರಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಂಗಾಧರ ಕಿತ್ತೂರ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ಕಾರವಾರ: ಜೋಯಿಡಾ ತಾಲೂಕಿನ ಉಳವಿಯ ಚೆನ್ನಬಸವೇಶ್ವರ ದೇವರ ಮಹಾರಥೋತ್ಸವ ಫೆ. ೨೪ರಂದು ಸಂಜೆ ೪ ಗಂಟೆಗೆ ನಡೆಯಲಿದೆ. ಅಂದಾಜು ೪ ಲಕ್ಷ ಭಕ್ತರು ಸೇರುವ ಸಾಧ್ಯತೆಯಿದೆ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ನ ಅಧ್ಯಕ್ಷ ಗಂಗಾಧರ ಕಿತ್ತೂರು ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ (ಫೆ.16) ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ೨೪ರಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾ ರಥೋತ್ಸವಕ್ಕೆ ಚಾಲನೆ ನೀಡುವರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ, ಕಾರವಾರ ಎಸಿ ಕನಿಷ್ಕ್, ಕೆಟಿಆರ್ ಡಿಸಿಎಫ್ ನಿಲೇಶ ಶಿಂಧೆ ಮೊದಲಾದವರು ಉಪಸ್ಥಿತರಿರುವರು ಎಂದು ಹೇಳಿದರು.ದೇವಸ್ಥಾನದ ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ ಮಾತನಾಡಿ, ಶುಕ್ರವಾರ (ಫೆ. ೧೬)ದಂದು ಬೆಳಗ್ಗೆ ಧ್ವಜಾರೋಹಣ, ರಥಗಳ ಪೂಜೆ, ಸೀಮೆ ಕಟ್ಟುವುದು, ಮಹಾಪೂಜೆಯೊಂದಿಗೆ ಜಾತ್ರೆಯ ಕಾರ್ಯಕ್ರಮ ಆರಂಭವಾಗಿದೆ. ಫೆ. ೧೭ರಂದು ಪಲ್ಲಕ್ಕಿ ಉತ್ಸವ, ೧೮ರಂದು ಸಂಜೆ ಭೂಮಿಪೂಜೆ, ನವಧಾನ್ಯ ಹಾಕುವುದು, ೧೯ರಂದು ಹುಂಡಿ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ೨೦ರಂದು ಪಲ್ಲಕ್ಕಿ ಉತ್ಸವ, ರಕ್ಷಾದೇವಿ ಸಣ್ಣ ರಥೋತ್ಸವ, ೨೧ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, ೨೨ರಂದು ಎಲ್ಲ ದೇವಾದಿಗಳ ಸಣ್ಣ ರಥೋತ್ಸವ, ೨೩ರಂದು ಚೆನ್ನಬಸವೇಶ್ವರ ರಥಾರೋಹಣ, ೨೪ರಂದು ಮಹಾರಥೋತ್ಸವ, ೨೫ರಂದು ಬಯಲು ಕುಸ್ತಿ, ೨೬ರಂದು ಓಕಳಿ, ಸಣ್ಣ ರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಸ್ಟ್‌ನ ಉಪಾಧ್ಯಕ್ಷ ಸಂಜಯ ಕಿತ್ತೂರು, ಉತ್ತರ ಕನ್ನಡ ಒಂದೇ ಅಲ್ಲದೇ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಅಂದಾಜು ೧೫೦೦ ಚಕ್ಕಡಿಗಾಡಿಗಳು ಬರುವ ಸಾಧ್ಯತೆಯಿದ್ದು, ೪ ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಶೌಚಾಲಯ, ಕುಡಿಯುವ ನೀರು ಒಳಗೊಂಡು ಭಕ್ತರಿಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ಜಿಪಂ, ಗ್ರಾಪಂ ಸಹಕಾರದಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಉಳವಿ ಜಾತ್ರೆಗೆ ಚಾಲನೆ: ಶರಣರ ಪುಣ್ಯ ಕ್ಷೇತ್ರ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಜಾತ್ರೆಗೆ ರಥಸಪ್ತಮಿ ದಿನ ಚಾಲನೆ ನೀಡಲಾಗಿದೆ. ಗುರುವಾರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಂಗಾಧರ ಕಿತ್ತೂರ ಧ್ವಜಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ಷಟ್ ಸ್ಥಳ ಧ್ವಜಾರೋಹಣ: ಅಧ್ಯಕ್ಷ ಗಂಗಾಧರ ಕಿತ್ತೂರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಚನ್ನಬಸವಣ್ಣನವರ ಭಾವಚಿತ್ರಕ್ಕೆ ಪ್ರಧಾನ ಅರ್ಚಕ ಶಂಕರಯ್ಯ ಕಲ್ಮಠ ಶಾಸ್ತ್ರಿ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಉಪ್ಪಿನಮಠ, ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ವಿನಯ ಹೊಸಮಠ, ಶಾಂತವೀರ ಕಲ್ಮಠ, ಸಂತೋಷ ಹೊಸಮಠ ವಿಶೇಷ ಪೂಜೆಗೆ ಸಹಕಾರ ನೀಡಿದರು.

ಪ್ಲಾಸ್ಟಿಕ್ ಮುಕ್ತ ಉಳವಿ ಗ್ರಾಮ: ಉಳವಿ ಗ್ರಾಮವನ್ನು ಇಕೋ ವಿಲೇಜ್ ಎಂದು ಘೋಷಣೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬ್ಯಾಗ್ , ಬಾಟಲಿಗಳನ್ನು ಬಳಸದೆ ಬಟ್ಟೆ ಚೀಲಗಳನ್ನು ಬಳಸಬೇಕು. ಬಯಲು ಬಹಿರ್ದೆಸೆ ಮಾಡದೆ ಶೌಚಾಲಯ ಬಳಸಿ, ಬಯಲು ಮಲ ವಿಸರ್ಜನೆ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ ಕಾರಣ ಎಲ್ಲರೂ ಸಹಕರಿಸಬೇಕು ಎಂದು ತಾಪಂಕಾನಿ ಅಧಿಕಾರಿ ಆನಂದ್ ಬಡಕುಂದ್ರಿ ಕರೆ ನೀಡಿದ್ದಾರೆ.