ಸೋಮವಾರಪೇಟೆ: ಸರ್ಫೇಸಿ ಕಾಯಿದೆ ಕಾಫಿ ಬೆಳೆಗಾರರಿಗೆ ಮಾರಕವಾಗುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಸಿ.ಕೆ. ಮಲ್ಲಪ್ಪ ಆತಂಕ ವ್ಯಕ್ತಪಡಿಸಿದರು.ತೋಳೂರುಶೆಟ್ಟಳ್ಳಿ ಗ್ರಾಮದ ಸುಗ್ಗಿ ಕಟ್ಟೆಯಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದರು.

ಕಾಫಿ ಬೆಳೆಗಾರರು ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ವಿವಿಧ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ತೀರಿಸಲು ಸಾಧ್ಯವಾಗದೆ ಇರುವ ಪರಿಸ್ಥಿತಿ ಉಂಟಾಗಿದೆ ಎಂದರು. ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಕಾಡು ಪ್ರಾಣಿಗಳ ಹಾವಳಿ, ಅಕಾಲಿಕ ಮಳೆ, ಫಸಲು ಹಾನಿ, ಬೆಲೆ ಕುಸಿತ ಮುಂತಾದ ಸಮಸ್ಯೆಗಳು ಬೆಳೆಗಾರರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತಿವೆ. ಈ ಸಂದರ್ಭದಲ್ಲಿ ಸರ್ಫೇಸಿ ಕಾಯ್ದೆಯಡಿ ಬ್ಯಾಂಕುಗಳು ನೇರವಾಗಿ ಕಾಫಿ ತೋಟಗಳನ್ನು ಹರಾಜು ಮಾಡುವ ನೋಟಿಸ್ ನೀಡುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಾಡುಪ್ರಾಣಿ ಹಾವಳಿ: ಬೆಳೆಗಾರರು ಎದುರಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಮಾತನಾಡಿದ ಅವರು, ಕಾಫಿ ತೋಟಗಳಿಗೆ ಕಾಡಾನೆಗಳು, ಕಾಡುಕೋಣಗಳು ಸೇರಿದಂತೆ ಹಲವು ಪ್ರಾಣಿಗಳಿಂದ ಹಾನಿ ಉಂಟುಮಾಡುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಸಭೆ ಒತ್ತಾಯಿಸಿತು. ಇದರೊಂದಿಗೆ ಸಿ ಮತ್ತು ಡಿ ಯ ಜಾಗದ ಸಮಸ್ಯೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ಮಾತನಾಡಿ, ಬೆಳೆಗಾರರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ಸಂಘಟಿತ ಹೋರಾಟಗಳ ರೂಪಿಸದಿದ್ದರೆ ಮುಂದೊಂದು ದಿನ ಎಲ್ಲವನ್ನೂ ಕಳೆದು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಕಾರ್ಯದರ್ಶಿ ಮನೋಹರ್, ನಿರ್ದೇಶಕರಾದ ಅನಂತರಾಮ್, ದಳವಾಯಿ ರಾಜು, ಯಂ.ಬಿ. ರಾಜಪ್ಪ, ಮಾಚಯ್ಯ, ನಿಂಗಪ್ಪ, ತೋಳೂರು ಶೆಟ್ಟಳ್ಳಿ ಗ್ರಾಮ ಮಂಡಳಿ ಅಧ್ಯಕ್ಷ ರಾಜಗೋಪಾಲ್, ಕಾರ್ಯದರ್ಶಿ ಮಹೇಶ್ ಇದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಸಂಘದ ಮೂಲಕ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ಸರ್ಕಾರ ಮತ್ತು ಬ್ಯಾಂಕುಗಳು ಬೆಳೆಗಾರರ ಸಂಕಷ್ಟವನ್ನು ಮನಗಂಡು ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.