ಮಂಗಳೂರು: ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ರೋಟರಿ ಮಂಗಳೂರು ಡೌನ್ ಟೌನ್ ಮತ್ತು ರೋಟರಿ ಮಂಗಳೂರು ಹಿಲ್ ಸೈಡ್ ಸಂಸ್ಥೆಯು ಆಧುನಿಕ ಶೈಲಿಯ ಅಲ್ಟ್ರಾ ಸೌಂಡ್ ವೈದ್ಯಕೀಯ ಯಂತ್ರೋಪಕರಣ ದಾನದ ರೂಪದಲ್ಲಿ ನೀಡಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಪ್ರಕಾಶ್ ತಿಳಿಸಿದರು.

ಅವರು ಶನಿವಾರ ನಗರದ ಪ್ರಾದೇಶಿಕ ಅತ್ಯಾಧುನಿಕ ಮಕ್ಕಳ ಚಿಕಿತ್ಸಾ ಕೇಂದ್ರದ ಸಭಾಂಗಣದಲ್ಲಿ, ರೋಟರಿ ಸಂಸ್ಥೆಯ ಯಂತ್ರೋಪಕರಣ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಆರೋಗ್ಯ ಸೇವೆ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಹೆಚ್.ಆರ್. ಮಾತನಾಡಿ, ಸಮಾಜದ ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆ ನೀಡುವ ಕಾರ್ಯ ಅಮೂಲ್ಯ ಮತ್ತು ಶ್ಲಾಘನೀಯ. ಇದು ಬಡವರಿಗೆ ಉತ್ತಮ ಮತ್ತು ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ ಎಂದರು.

ರಿಸ್ಕನೆಕ್ಟ್ ಸಂಸ್ಥೆಯ ನಿರ್ದೇಶಕಿ ಶುಭ ಅವರು ಈ ಯಂತ್ರೋಪಕರಣವನ್ನು ನಮ್ಮ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಅಂಗವಾಗಿ ಪ್ರಾಯೋಜಿಸಲಾಗಿದೆ ಎಂದು ಸಾಂಕೇತಿಕವಾಗಿ ದಾಖಲೆ ಪತ್ರಗಳನ್ನು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ವೆನ್ಲಾಕ್ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ರಂಜನ್ ರಾವ್, ಯಂತ್ರೋಪಕರಣದ ಕಾರ್ಯನಿರ್ವಹಣೆ, ಚಿಕಿತ್ಸೆಯ ವಿಧಾನದ ಬಗ್ಗೆ ಮಾಹಿತಿ ನೀಡಿದರು.


ರೋಟರಿ ಮಂಗಳೂರು ಡೌನ್ ಟೌನ್ ಸಂಸ್ಥೆಯ ಅಧ್ಯಕ್ಷ ಸತ್ಯಜೀತ್ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯನ್ನು ತಮ್ಮ ಸಂಸ್ಥೆಯ ಸಮಾಜಸೇವಾ ಅಂಗವಾಗಿ ಆಯೋಜಿಸಲಾಗಿದೆ ಎಂದರು.

ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುಧಾಕರ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಡಾ.ಶಿವಪ್ರಸಾದ್, ರಂಗನಾಥ್ ಭಟ್, ಉಮೇಶ್ ಕಿಣಿ, ವಾಸುದೇವ್ ಶೆಟ್ಟಿಗಾರ್, ಏಕನಾಥ್ ದಂಡಕೇರಿ, ಸೂರಜ್ ಹೆಬ್ಬಾರ್ ಇದ್ದರು. ರೋಟರಿ ಮಂಗಳೂರು ಹಿಲ್ ಸೈಡ್ ಸಂಸ್ಥೆಯ ಅಧ್ಯಕ್ಷ ಪೀಟರ್ ಅಂತೋನಿ ಪಿಂಟೋ ಸ್ವಾಗತಿಸಿದರು. ವೆನ್ಲಾಕ್ ಆಸ್ಪತ್ರೆಯ ಡಾ.ಸುರೇಶ್ ಭಟ್ ವಂದಿಸಿದರು.