ಕನ್ನಡಪ್ರಭ ವಾರ್ತೆ ಬೆಂಗಳೂರು
ಎರಡು ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಸರ್ಕಲ್‌ನಲ್ಲಿ ನಡೆದಿದೆ. ಗಾಯಗೊಂಡ 14 ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಕೆ.ಆರ್.ಸರ್ಕಲ್ ಜಂಕ್ಷನ್ ಸಿಗ್ನಲ್‌ನಲ್ಲಿ ಬಿಎಂಟಿಸಿಯ ‘ವಾಯು ವಜ್ರ’ ಬಸ್ ನಿಂತಿತ್ತು. ಇದೇ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮತ್ತೊಂದು ಎಲೆಕ್ಟ್ರಿಕ್ ಬಿಎಂಟಿಸಿ ಬಸ್, ಸಿಗ್ನಲ್‌ನಲ್ಲಿ ನಿಂತಿದ್ದ ಬಸ್‌ಗೆ ಹಿಂಬದಿಯಿಂದ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು, ಬಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ಜಖಂಗೊಂಡ ಬಸ್‌ನಲ್ಲಿ ಮಹಿಳೆಯೊಬ್ಬರ ಕಾಲು ಸಿಕ್ಕಿ ಹಾಕಿಕೊಂಡಿತ್ತು. ಕಬ್ಬಿಣದ ಸಲಾಕೆಗಳನ್ನು ತುಂಡರಿಸಿ ಸಾಹಸಪಟ್ಟು ಮಹಿಳೆಯನ್ನು ಹೊರ ತೆಗೆಯಲಾಯಿತು. ಬಸ್‌ಗಳಲ್ಲಿ ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗದ ಸೀಟುಗಳಲ್ಲಿದ್ದ ಹಲವು ಮಹಿಳಾ ಪ್ರಯಾಣಿಕರಿಗೆ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ರಕ್ಷಣೆಗೆ ಧಾವಿಸಿದ ಸ್ಥಳೀಯರು:ಅಪಘಾತ ಸಂಭವಿಸುತ್ತಿದ್ದಂತೆ ಗಾಯಾಳುಗಳ ಕಿರುಚಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ, ಅದರ ಹೆಡ್‌ಲೈಟ್ ಮತ್ತು ಮುಂಭಾಗದ ಕಬ್ಬಿಣದ ಭಾಗಗಳು ಬಸ್ ಒಳಗೆ ನುಗ್ಗಿದ್ದವು. ಇದರಿಂದಾಗಿ ಮುಂಭಾಗದ ಸೀಟಿನಲ್ಲಿದ್ದ ಹಲವಾರು ಪ್ರಯಾಣಿಕರು ಸೀಟುಗಳ ಮಧ್ಯೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದ್ದರು. ಇದನ್ನು ಕಂಡ ಸಾರ್ವಜನಿಕರು ಹಾಗೂ ವಾಹನ ಸವಾರರು ತಕ್ಷಣ ನಜ್ಜುಗುಜ್ಜಾಗಿದ್ದ ಬಸ್‌ನ ಭಾಗಗಳನ್ನು ಸರಿಸಿ, ಒಳಗೆ ಸಿಲುಕಿ ಒದ್ದಾಡುತ್ತಿದ್ದ ಪ್ರಯಾಣಿಕರನ್ನು ಹರಸಾಹಸ ಮಾಡಿ ರಕ್ಷಿಸಿದರು. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಯಿತು.
ಸಂಚಾರ ದಟ್ಟಣೆ:
ಅಪಘಾತಕ್ಕೀಡಾದ ಪರಿಣಾಮ ಇಡೀ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಹಲಸೂರು ಗೇಟ್ ಸಂಚಾರ ಪೊಲೀಸರು ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದ್ದೆಯೇ ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರದಿಂದ ಚಿಕಿತ್ಸಾವೆಚ್ಚ ಭರಿಸಲಿದೆ: ಬೈರತಿ
ಬಿಎಂಟಿಸಿ ಬಸ್‌ಗಳ ನಡುವಿನ ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅದರ ಜತೆಗೆ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ಮತ್ತು ಅವುಗಳ ಕಾರ್ಯಕ್ಷಮತೆ ಬಗ್ಗೆ ಅಧ್ಯಯನ ನಡೆಸಲು ಸಾರಿಗೆ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು. ಅಪಘಾತದಿಂದ ಗಾಯಗೊಂಡು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಚಿಕಿತ್ಸೆ ಕುರಿತಂತೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 2 ಬಸ್‌ಗಳ ನಡುವೆ ಅಪಘಾತದಲ್ಲಿ 14 ಜನರಿಗೆ ಗಾಯಗಳಾಗಿದ್ದು, ಓರ್ವ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಬಸ್‌ಗಳಿಗೆ ವಿಮೆಯಿರುವ ಕಾರಣ ವಿಮೆ ಕ್ಲೇಮ್ ಮಾಡಿ ಗಾಯಾಳುಗಳಿಗೆ ಪರಿಹಾರ ಕೊಡಿಸಲಾಗುವುದು. ಜತೆಗೆ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.