ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಮಕ್ಕಳ ಸುರಕ್ಷತೆ, ಆರೋಗ್ಯ ಹಾಗೂ ನೈತಿಕ ಬೆಳವಣಿಗೆಗೆ ಅಪಾಯ ಉಂಟು ಮಾಡುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಆಡಳಿತ ವ್ಯವಸ್ಥೆ ಏನೆಲ್ಲಾ ಪ್ರಯತ್ನಿಸಿದರೂ ಸಮಾಜದಲ್ಲಿ ಬಾಲಕಾರ್ಮಿಕರ ಸಂಖ್ಯೆ ಮಾತ್ರ ಸಂಪೂರ್ಣವಾಗಿ ಇಳಿಮುಖವಾಗಿಲ್ಲ. ಇಷ್ಟಾಗಿಯೂ ಅನೇಕ ಕಾರ್ಯಗಳ ಮೂಲಕ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಆಗಿಸಲು ಕಾರ್ಮಿಕ ಇಲಾಖೆ ಕಾರ್ಯೋನ್ಮುಖವಾಗಿದೆ.ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಬಾಲಕಾರ್ಮಿಕ ನಿಷೇಧ ಕಾಯ್ದೆ, ವಿರೋಧಿ ದಿನಾಚರಣೆ ಸೇರಿದಂತೆ ಹತ್ತಾರು ಜಾಗೃತಿ ಕಾರ್ಯಕ್ರಮಗಳ ಮೂಲಕ ದಿನದಿಂದ ದಿನಕ್ಕೆ ಬಾಲಕಾರ್ಮಿಕರ ಸಂಖ್ಯೆ ಕ್ಷೀಣಿಸುತ್ತಿದ್ದರೂ ಬಡತನದ ಹಿನ್ನೆಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಚಾಲ್ತಿಯಲ್ಲಿದೆ.
ಬಾಲ ಕಾರ್ಮಿಕರಲ್ಲಿಯೇ ಎರಡು ವಿಧಗಳನ್ನಾಗಿ ಮಾಡಲಾಗಿದೆ. 6-14 ವರ್ಷದೊಳಗಿನ ಮಕ್ಕಳಿಗೆ ಬಾಲಕಾರ್ಮಿಕರು ಹಾಗೂ 16-18 ವರ್ಷದೊಳಗಿನ ಮಕ್ಕಳನ್ನು ಕಿಶೋರ ಕಾರ್ಮಿಕರನ್ನಾಗಿ ವಿಂಗಡಿಸಲಾಗಿದೆ. ಸಮಾಜದಲ್ಲಿ ಈಗ ಬಾಲಕಾರ್ಮಿಕರಿಂದ ಕಿಶೋರ ಕಾರ್ಮಿಕರೇ ಹೆಚ್ಚಿದ್ದಾರೆ. ಎಸ್ಸೆಸ್ಸೆಲ್ಸಿ ನಂತರ ಹೆಚ್ಚಿನ ಮಕ್ಕಳು ಅನಿವಾರ್ಯ ಕಾರಣಗಳಿಂದ ಕೆಲಸಕ್ಕೆ ಹೋಗುವಂತಾಗಿದೆ.ಪ್ರತಿ ವರ್ಷ ಜೂನ್‌ನಿಂದ ಆಗಸ್ಟ್ ತಿಂಗಳ ವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತೇವೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಸಹಾಯಕ ಕಾರ್ಮಿಕ ಆಯುಕ್ತ ಸಚಿನ ಹಳೆಮನಿ, ಹೆಚ್ಚಾಗಿ ಮಾರುಕಟ್ಟೆಗಳ ಅಂಗಡಿಗಳು, ಹೋಟೆಲ್‌ಗಳು, ಗ್ಯಾರೆಜ್, ಇಟ್ಟಿಗೆ ಬಟ್ಟಿಗಳು, ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ಇಂತಹ ಬಾಲಕಾರ್ಮಿಕರು ಅದರಲ್ಲೂ ಕಿಶೋರ ಕಾರ್ಮಿಕರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಜನದಟ್ಟಣೆ ಪ್ರದೇಶದಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಳ್ಳಬೇಡಿ ಎಂದು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಆಶಾ- ಅಂಗನವಾಡಿ, ಶಾಲಾ- ಕಾಲೇಜುಗಳಲ್ಲೂ ಜಾಗೃತಿ ನಡೆಸುತ್ತಿದ್ದೇವೆ. ಇದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರದ ಸಹಕಾರ ಸಹ ಪಡೆದು ಕಾರ್ಯಕ್ರಮಗಳನ್ನು ಮಾಡುತ್ತಿರುವುದಾಗಿ ಹೇಳಿದರು.
ದಂಡ, ಜೈಲು ಶಿಕ್ಷೆ: ಕಾರ್ಮಿಕ ಇಲಾಖೆಯು ಜಿಲ್ಲೆಯಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿ ಜಾರಿ ಮಾಡುತ್ತಿದ್ದು, ಬಾಲಕಾರ್ಮಿಕರನ್ನು ಬಳಸಿಕೊಂಡ ಮಾಲೀಕರ ವಿರುದ್ಧ ಕಳೆದ ವರ್ಷ 34 ಪ್ರಕರಣಗಳನ್ನು ದಾಖಲಿಸಿದ್ದು, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿವೆ. ಈ ಪೈಕಿ 9 ಪ್ರಕರಣಗಳಲ್ಲಿ ಮಾಲೀಕರಿಗೆ ₹1.13 ಲಕ್ಷ ದಂಡ ಸಹ ವಿಧಿಸಿದೆ. ಈ ಪ್ರಕಣದಲ್ಲಿ ₹20 ರಿಂದ 50 ಸಾವಿರ ದಂಡ ವಿಧಿಸಲಾಗುತ್ತಿದೆ. ಅಪರಾಧ ಪುನರಾವರ್ತಿತವಾದರೆ ಆರೋಪಿಗೆ 6 ತಿಂಗಳ ಜೈಲು ಶಿಕ್ಷೆ ಸಹ ಇದ್ದು, ಬಾಲಕಾರ್ಮಿಕರನ್ನು ಬಳಸಿಕೊಳ್ಳುವವರು ಇನ್ನಾದರೂ ಎಚ್ಚರ ಹೊಂದಲಿ ಎಂದು ಸಚಿನ್ ಹಳೆಮನಿ ತಿಳಿಸಿದರು.ಇನ್ನಷ್ಟು ಜಾಗೃತಿ: ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ ಮಾತನಾಡಿ, 20123-24ರಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 30 ಬಾಲಕಾರ್ಮಿಕರು (ಮೂವರು ಬಾಲಕಾರ್ಮಿಕರು, 27 ಕಿಶೋರ ಕಾರ್ಮಿಕರು) ಪತ್ತೆಯಾಗಿದ್ದರು. ಹಾಗೆಯೇ, 2024-25ನೇ ಸಾಲಿನಲ್ಲಿ ನಡೆದ 910 ಸ್ಥಳಗಳ ತಪಾಸಣೆ ಕಾರ್ಯದಲ್ಲಿ ನಾಲ್ವರು ಬಾಲಕಾರ್ಮಿಕರು ಹಾಗೂ 30 ಕಿಶೋರ ಕಾರ್ಮಿಕರು ಸೇರಿ 34 ಬಾಲಕಾರ್ಮಿಕರನ್ನು ಗುರುತಿಸಲಾಗಿದೆ. ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಪಣ ನಮ್ಮದಿದೆ ಎಂದರು.
ಸಾರ್ವಜನಿಕರು ಮಾಹಿತಿ ನೀಡಿ: ಬಾಲಕಾರ್ಮಿಕರನ್ನು ಪತ್ತೆ ಹಚ್ಚುವುದು ಬರೀ ಕಾರ್ಮಿಕ ಇಲಾಖೆಯೊಂದರ ಕಾರ್ಯವಲ್ಲ. ನಮ್ಮ ಜತೆಗೆ ಪೊಲೀಸ ಇಲಾಖೆ, ಕಂದಾಯ, ಶಿಕ್ಷಣ ಸೇರಿ 13 ಇಲಾಖೆಗಳು ಸಹ ಕಾರ್ಯ ಮಾಡುತ್ತಿವೆ. ಇದಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ಸಹ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಪಣ ತೊಟ್ಟಾಗ ಮಾತ್ರ ನಮ್ಮ ಶ್ರಮಕ್ಕೆ ಫಲ ದೊರೆಯಲಿದೆ. ಬಾಲಕಾರ್ಮಿಕರ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಕೂಡಲೇ ಸಹಾಯವಾಣಿ 1098 ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸಹಾಯಕ ಕಾರ್ಮಿಕ ಅಧಿಕಾರಿ ಸಚಿನ ಹಳೆಮನಿ ಹೇಳಿದರು.