ಕಳೆದ ಎರಡು ದಿನಗಳಿಂದ ಒಂದು ಸಾವಿರಕ್ಕೂ ಹೆಚ್ಚು ಒತ್ತುವರಿ ಕೆಲವು ಮಾಡಲಾಗಿದೆ. ಉಳಿದವರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ಒತ್ತುವರಿದಾರರು ನಮ್ಮ ಸೂಚನೆಗೆ ಬೆಲೆ ನೀಡದಿದ್ದರೆ ಬಲವಂತದ ಕ್ರಮ ಅನುಸರಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಪೇಟೆ ಬೀದಿಯ ಫುಟ್ ಪಾತ್ ಒತ್ತುವರಿ ತೆರವು ಕಾರ್ಯವನ್ನು ನಗರಸಭೆ ಅಧಿಕಾರಿಗಳು ಶುಕ್ರವಾರವೂ ಮುಂದುವರಿಸಿದರು. ನಗರಸಭೆ ಆಯುಕ್ತೆ ಎನ್.ಎಸ್.ರಾಧಿಕಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ತೆರವು ಕಾರ್ಯಾಚರಣೆ ನಡೆಸಿದರು. ಬೆಂಗಳೂರು- ಮೈಸೂರು ಹೆದ್ದಾರಿಯ ಸರ್ವೀಸ್ ರಸ್ತೆಯ ಎಂ.ಎಸ್.ಸಿದ್ದರಾಜು ಕಾಂಪ್ಲೆಕ್ಸ್, ಕೊಲ್ಲಿ ಸರ್ಕಲ್, ಪೇಟೆ ಬೀದಿ, ಸರ್ಕಾರಿ ಪ್ರಾಥಮಿಕ ಶಾಲೆ, ಮಸೀದಿ, ಕೆನರಾ ಬ್ಯಾಂಕ್, ದರ್ಗಾ, ತಾಲೂಕು ಪಂಚಾಯಿತಿ ಕಚೇರಿ, ಸಂಜಯ ಚಿತ್ರಮಂದಿರ ಹಾಗೂ ಪ್ರವಾಸಿ ಮಂದಿರವೃತ್ತದಲ್ಲಿ ಗುರುವಾರ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರೂ ಸಹ ವರ್ತಕರು ಪುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸದೆ ಹಾಗೂ ಅಂಗಡಿಗಳ ಮುಂಭಾಗದ ಕಬ್ಬಿಣದ ಶೀಟ್ ಗಳನ್ನು ತೆಗೆಯದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದರು. ಈ ಬಗ್ಗೆ ಅಧಿಕಾರಿಗಳ ತಂಡ ನಗರಸಭೆ ಸಿಬ್ಬಂದಿ ಸಹಾಯದೊಂದಿಗೆ ಶೀಟ್ ಗಳು ಮತ್ತು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ತೆರವು ಮಾಡಿದರು. ನಂತರ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತೆ ರಾಧಿಕಾ, ಕಳೆದ ಎರಡು ದಿನಗಳಿಂದ ಒಂದು ಸಾವಿರಕ್ಕೂ ಹೆಚ್ಚು ಒತ್ತುವರಿ ಕೆಲವು ಮಾಡಲಾಗಿದೆ. ಉಳಿದವರಿಗೆ ಮೌಖಿಕ ಎಚ್ಚರಿಕೆ ನೀಡಲಾಗಿದೆ. ಒತ್ತುವರಿದಾರರು ನಮ್ಮ ಸೂಚನೆಗೆ ಬೆಲೆ ನೀಡದಿದ್ದರೆ ಬಲವಂತದ ಕ್ರಮ ಅನುಸರಿಸಲಾಗುವುದು ಎಂದು ತಿಳಿಸಿದರು. ಕಾರ್ಯಾಚರಣೆಯಲ್ಲಿ ಮದ್ದೂರು ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ನವೀನ್, ಸಂಚಾರಿ ಠಾಣೆಯ ಪಿಎಸ್ಐ ಗಳಾದ ರಾಮಸ್ವಾಮಿ, ಕಮಲಾಕ್ಷಿ, ಪರಿಸರ ಅಭಿಯಂತರೆ ಅರ್ಚನ ಆರಾಧ್ಯ, ಕಂದಾಯ ಅಧಿಕಾರಿ ಪುಟ್ಟಸ್ವಾಮಿ ಮತ್ತಿತರರು ಭಾಗವಹಿಸಿದ್ದರು.